ತುಮಕೂರಿನಲ್ಲಿ ಕಾರಿಗೆ ಬೆಂಕಿ ಮೂವರ ಕೊಲೆ ಪ್ರಕರಣ: ತುಮಕೂರು ಪೊಲೀಸರಿಂದ ತಲೆ ಮರೆಸಿಕೊಂಡಿದ್ದ ಆರು ಮಂದಿ ಆರೋಪಿಗಳ ಬಂಧನ: ಮುರುಡೇಶ್ವರದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು

Suddi Udaya

ಬೆಳ್ತಂಗಡಿ : ತುಮಕೂರಿನಲ್ಲಿ ಬೆಳ್ತಂಗಡಿ ಪರಿಸರದ ಶಾಹುಲ್ ಹಮೀದ್, ಸಿದ್ದೀಕ್, ಇಸಾಕ್ ಸಿಮಾಮ್ ರನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಮತ್ತೆ ಆರು ಜನರನ್ನು ತುಮಕೂರು ಜಿಲ್ಲೆಯ ಕೋರಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ: 22-03-2024 ರಂದು ಮಧ್ಯಾಹ್ನ ಸುಮಾರು 1.15 ಗಂಟೆಗೆ ಕೋರಾ ಪೊಲೀಸ್ ಠಾಣಾವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ 3 ಮಂದಿಯ ದೇಹಗಳು ಸುಟ್ಟ ಸ್ಥಿತಿಯಲ್ಲಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕೋರಾ ಪೊಲೀಸ್ ಠಾಣೆಯ ಪಿಎಸ್‌ಐ ರವರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಒಂದು ಮಾರುತಿ ಸುಜುಕಿ S-PRESSO ಕಾರಿನ ಹಿಂಭಾಗದ ಸೀಟಿನಲ್ಲಿ ಒಂದು ಮತ್ತು ಡಿಕ್ಕಿಯಲ್ಲಿ ಎರಡು ದೇಹಗಳು ಸುಟ್ಟು ಕರಕಲಾಗಿದ್ದು, ಯಾರೋ ದುಷ್ಕರ್ಮಿಗಳು ಯಾರೋ 3 ಜನರನ್ನು ಯಾವುದೋ ಕಾರಣಕ್ಕೆ ಕೊಲೆ ಮಾಡಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಪೆಟ್ರೋಲ್ ಅಥವಾ ಬೇರಾವುದೋ ಇಂಧನ ಸುರಿದು ಬೆಂಕಿ ಹಚ್ಚಿ ಸುಟ್ಟಿರೋದು ಕಂಡು ಬಂದಿತ್ತು. ಅದರಂತೆ ಕೋರಾ ಪೊಲೀಸ್ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮೂವರಿದ್ದ ಕಾರಿನ ನಂಬರಿನ ಮೂಲಕ ಮಾಹಿತಿ ಸಂಗ್ರಹಿಸಿ ಇಬ್ಬರು ಆರೋಪಿಗಳಾದ ಪಾತರಾಜು @ರಾಜು ಮತ್ತು ಗಂಗರಾಜು ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು.

ಪ್ರಮುಖ ಆರೋಪಿಗಳ ಬಂಧನ: ತುಮಕೂರಿನ ಶಿರಾ ಗೇಟ್‌ನಲ್ಲಿ ವಾಸವಿರುವ ಪಾತರಾಜು @ ರಾಜು @ ರಾಜಗುರು @ಕುಮಾರ್, ಇನ್ನೊರ್ವ ಆರೋಪಿ ಸತ್ಯಮಂಗಲದ ವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬಾತನನ್ನು ಮಾ.25 ರಂದು ಬಂಧಿಸಿ ಏಳು ದಿನಗಳ ಪೊಲೀಸ್ ಕಸ್ಟಡಿ ಪಡೆದಿದ್ದಾರೆ.

ಆರು ಜನರ ಬಂಧನ: ಪ್ರಕರಣ ಬಳಿಕ ಪರಾರಿಯಾದ ಆರು ಜನ ಆರೋಪಿಗಳಾದ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂದನ್(24) , ಸಂತೇಪೇಟೆಯ ನವೀನ್(24) ,ವೆಂಕಟೇಶಪುರದ ಕೃಷ್ಣ(22), ಹೊಂಬಯ್ಯನಪಾಳ್ಯದ ಗಣೇಶ್(19), ನಾಗಣ್ಣನಪಾಳ್ಯದ ಕಿರಣ್(23) ,ಕಾಳಿದಾಸನಗರದ ಸೈಮನ್(18) ಸೇರಿ ಆರು ಜನರನ್ನು ಮುರುಡೇಶ್ವರದ ಲಾಡ್ಜ್ ನಲ್ಲಿ ಮಾ.26 ರಂದು ಸಂಜೆ ಬಂಧಿಸಿ ತುಮಕೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಏಳು ದಿನಗಳ ಪೊಲೀಸ್ ಕಸ್ಟಡಿ ನೀಡಿದೆ.

ಪ್ರಮುಖ ಆರೋಪಿ ಮಾಹಿತಿ ಮೇರೆಗೆ ಪರಾರಿಯಾಗಿದ್ದ ಆರು ಜನರು: ಆರು ಜನ ಆರೋಪಿಗಳು ತುಮಕೂರಿನಲ್ಲಿ ಹೂ ಮಾರಾಟದ ಲೈನ್ ನಲ್ಲಿ ಕೆಲಸ ಮಾಡುವ ಯುವಕರಾಗಿದ್ದು ಮೂರು ಕೆಜಿ ಚಿನ್ನ ಸಿಗುವ ಆಸೆಯಲ್ಲಿ ಪಾತರಾಜ್ ಮಾಹಿತಿಯಂತೆ ಕೇವಲ 8,000 ಹಣವನ್ನು ಪಡೆದು ಕೊಲೆ ಮಾಡಿದ್ದಾರೆ. ಬಳಿಕ ರೈಲು ಮೂಲಕ ಮುರುಡೇಶ್ವರದ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು‌. ಪಾತರಾಜ್ ಬಂಧನವಾಗಿ ಪೊಲೀಸರ ವಿಚಾರಣೆಯಲ್ಲಿ ಉಳಿದ ಆರು ಜನ ಆರೋಪಿಗಳ ಮಾಹಿತಿ ನೀಡಿದ್ದ‌ ಎನ್ನಲಾಗಿದೆ.

ಕೊಲೆಗೆ 15 ಲೀಟರ್ ಪೆಟ್ರೋಲ್ ಬಳಕೆ : ಕೊಲೆ ಮಾಡಿದ ಬಳಿಕ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಲು ಆರೋಪಿಗಳು ಪಕ್ಕದ ಪೆಟ್ರೋಲ್ ಪಂಪ್ ನಿಂದ 15 ಲೀಟರ್ ಪೆಟ್ರೋಲ್ ಖರೀದಿ ಮಾಡಿ ತಂದಿರುವ ಬಗ್ಗೆ ಪೊಲೀಸರಿಗೆ ಸಿಸಿಕ್ಯಾಮರದ ದೃಶ್ಯ ಸಾಕ್ಷಿಯಾಗಿ ಸಿಕ್ಕಿದೆ‌.

Leave a Comment

error: Content is protected !!