ಮೂಡುಬಿದಿರೆ: ಮಾರ್ಚ್ ನಲ್ಲಿ ನಡೆದ 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿ ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ.
ಜೈನ ಕಾಶಿಯಾದ ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ರೂಪುಗೊಂಡಿದ್ದು, ಎಕ್ಸಲೆಂಟ್ ವಿದ್ಯಾ ಸಂಸ್ಥೆ ಕಳೆದ ಹನ್ನೊಂದು ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ಸಲ್ಲಿಸುತ್ತಿದ್ದು, ಶಿಸ್ತು ಸಂಸ್ಕಾರ ಬದ್ಧ ಜೀವನದ ಧ್ಯೇಯೋದ್ದೇಶವನ್ನು ಇಟ್ಟುಕೊಂಡು ಗುಣಮಟ್ಟದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಿದೆ. ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ ನಿರಂತರವಾಗಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುತ್ತದೆ.
ವಿಜ್ಞಾನ ವಿಭಾಗದಲ್ಲಿ ಗುಣಸಾಗರ ಡಿ. 597 ಅಂಕವನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿರುತ್ತಾರೆ ಮತ್ತು ಭಾರ್ಗವಿ ಎಂ.ಜೆ. 595 ಅಂಕವನ್ನು ಗಳಿಸುವುದರ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನವನ್ನು ಪಡೆದಿರುತ್ತಾರೆ. ಧ್ರುವ ಜಿ. ಹೆಗ್ಡೆ (591), ಪ್ರಾಪ್ತಿ ಬೆಳಕೇರಿ (591), ಸುಹಾಸ್ ಎಂ.ಎಸ್. (590), ಸ್ಪೂರ್ತಿ ಎಂ.ಜಿ. (590), ರಿಷಬ್ ರಾಜೇಶ್ ನಾಯಕ್ (590) ರಾಜ್ಯದ ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದದಲ್ಲಿ ಸ್ಪೂರ್ತಿ ಸಿ. ಪಾಟೀಲ್ 593 ಅಂಕವನ್ನು ಗಳಿಸುವುವುದರ ಮೂಲಕ ರಾಜ್ಯಕ್ಕೆ 5ನೇ ಸ್ಥಾನವನ್ನು ಪಡೆದಿರುತ್ತಾರೆ. ಖುಷಿ ಕೆ. (591), ರೋಚನಾ ಮಲ್ಯ(590), ಎ.ಪಿ. ರಕ್ಷಾ (589), ಶರದ್ ಎಂ. ಭಟ್ (589), ಸಾನಿಕಾ ಜೈನ್ (589), ಮೋಕ್ಷಾ ಜೈನ್ (588), ಸಂಸ್ಕೃತಿ ಪೂಜಾರಿ (588) ಉತ್ತಮ ಅಂಕವನ್ನು ಗಳಿಸುವುದರ ಮೂಲಕ ರಾಜ್ಯದಲ್ಲಿ ಮೊದಲ ಹತ್ತು ಸ್ಥಾನಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಸಂಸ್ಥೆಯ ಹದಿನೈದು ವಿದ್ಯಾರ್ಥಿಗಳು ಮೊದಲ ಹತ್ತು ರ‍್ಯಾಂಕ್‌ಗಳಲ್ಲಿ ಸ್ಥಾನವನ್ನು ಪಡೆದಿರುತ್ತಾರೆ.
ಪರೀಕ್ಷೆಗೆ ಹಾಜರಾದ 852 ವಿದ್ಯಾರ್ಥಿಗಳಲ್ಲಿ 851 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 649 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ, 201 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇಕಡಾ ನೂರು ಫಲಿತಾಂಶ ದಾಖಲಾಗಿದ್ದು ಸಂಸ್ಥೆಯ ಒಟ್ಟು ಫಲಿತಾಂಶ 99.90% ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಾಂಶುಪಾಲರು, ಪೋಷಕರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಕೋರಿದ್ದಾರೆ.