ಬೆಳ್ತಂಗಡಿ: ಇತ್ತಿಚೇಗೆ ನಡೆದ ಬಿಜೆಪಿ ಸಮಾವೇಶದಲ್ಲಿ ರಕ್ಷಿತ್ ಶಿವರಾಂ ಬೆಂಗಳೂರಿನಿಂದ ಆಮದು ಆದ ನಾಯಕ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ. ಆದರೆ ಶೋಭಾ ಕರಂದ್ಲಾಜೆ ಈಗ ಬೆಂಗಳೂರಿನಲ್ಲಿ ಚುನಾವಣೆಗೆ ನಿಂತಿದ್ದಾರೆ ಅವರು ಅಮದು ಆದ ನಾಯಕಿಯಲ್ಲವೇ, ಡಿ.ವಿ ಸದಾನಂದ ಗೌಡ ದ.ಕ ಜಿಲ್ಲೆಯವರು ಅವರು ಬೆಂಗಳೂರಿನಲ್ಲಿ ಚುನಾವಣೆಗೆ ನಿಂತಿದ್ದರು ಅವರು ಅಮದು ಆದ ನಾಯಕರಲ್ಲವೇ, ಬೆಂಗಳೂರಿನಲ್ಲಿದ್ದ ಹರೀಶ್ ಪೂಂಜರು ಬೆಳ್ತಂಗಡಿಗೆ ಆಮದು ಆಗಿ ಚುನಾವಣೆಗೆ ನಿಲ್ಲಲಿಲ್ಲವೆ ಎಂದು ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಧರಣೇಂದ್ರ ಕುಮಾರ್ ಪ್ರಶ್ನಿಸಿದರು.
ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಎ.೧೧ರಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ತಾಲೂಕಿನಾದ್ಯಂತ ನಿಮ್ಮ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ನೀವು ಏನೇನು ರಾಜಕೀಯ ಮಾಡಿದ್ದೀರಿ, ಯಾರಿಗೆಲ್ಲ ಪೇಮಂಟ್ ಬಾಕಿ ಇದೆ ಎಂದು ಮುಂದೆ ದಾಖಲೆ ಸಮೇತ ಸಾಬೀತು ಮಾಡುತ್ತೇವೆ. ನಮ್ಮ ನಾಯಕ ವಸಂತ ಬಂಗೇರರು ಪ್ರಮಾಣಕ್ಕೆ ಕರೆದಾಗ ನೀವು ಬಂದಿಲ್ಲ, ಈಗ ಸಿಕ್ಕ ಸಿಕ್ಕವರನ್ನು ಪ್ರಮಾಣಕ್ಕೆ ಕರೆಯುತ್ತಾ ಇದ್ದೀರಿ. ಮೊದಲು ನೀವು ಬಂಗೇರರು ಕರೆದ ಪ್ರಮಾಣದ ಸವಾಲಿಗೆ ಉತ್ತರಿಸಿ ಎಂದು ತಿಳಿಸಿದರು.
ನಮ್ಮ ಸರಕಾರ ಬಂದ ನಂತರ ವೇಣೂರು ಮಹಾಮಸ್ತಾಕಾಭಿಷೇಕ್ಕೆ ೪ ಕೋಟಿ., ಸುಲ್ಕೇರಿ ಬಸದಿಗೆ ರೂ.50 ಲಕ್ಷ. ನಾರಾವಿ ಬಸದಿಗೆ ರೂ. 50 ಲಕ್ಷ, ವೇಣೂರು ದೇವಸ್ಥಾನಕ್ಕೆ ರೂ.50 ಲಕ್ಷ, ಪೆರಾಡಿ ಕೋಟಿ ಚೆನ್ನಯ ಗರಡಿಗೆ ರೂ. 50 ಲಕ್ಷ, ಕುರ್ಲೊಟ್ಟು ಸತ್ಯಸಾರಮನಿ ದೈವಸ್ಥಾನಕ್ಕೆ ರೂ. 10ಲಕ್ಷ, ಕಳೆಂಜ ಕದ್ರಿ ಮಂಜುನಾಥೇಶ್ವರ ಭಜನಾ ಮಂದಿರಕ್ಕೆ ರೂ. 3 ಲಕ್ಷ ನೀಡಿದ್ದೇವೆ. 40% ಕಮಿಷನ್ ಬಗ್ಗೆ ನಿವೃತ ಹೈಕೋರ್ಟ್ ನ್ಯಾಯಾದೀಶರಾದ ನಾಗ ಮೋಹನದಾಸ್ ರವರ ನೇತೃತ್ವದಲ್ಲಿ ಸಮಿತಿ ಆಗಿದೆ. ವಿಚಾರಣೆ ಆಗ್ತಾ ಇದೆ. ಭ್ರಷ್ಟಾಚಾರದ ದಾಖಲೆಗಳನ್ನು ಸಮಿತಿಗೆ ನಾವು ಕೊಡ್ತವೆ. ನೀವೂ ಕಟಕಟೆಯಲ್ಲಿ ನಿಲ್ಲುವ ದಿನ ದೂರವಿಲ್ಲ ಎಂದು ಹೇಳಿದರು.
ನಮಗೆ ತಿಳಿದ ಮಾಹಿತಿಯಂತೆ ೧೯೯೨ ನೇ ಇಸವಿಯಲ್ಲಿ ಅಯೋಧ್ಯೆಯಲ್ಲಿ ಕರಸೇವೆ ನಡೆದದ್ದು. ನೀವು ಆಗ ೪ನೇ ತರಗತಿಯಲ್ಲಿ ಇದ್ರಿ. ಅದು ಹೇಗೆ ನೀವು ಕರಸೇವೆಗೆ ತೆರಳಲು ಮತ್ತು ಜೈಲುವಾಸ ಅನುಭವಿಸಲು ಸಾಧ್ಯ ಎಂದರಲ್ಲದೆ, ರಕ್ಷಿತ್ ಶಿವರಾಂ ಪುಸ್ತಕ ಕೊಟ್ಟ ಬಗ್ಗೆ ನೀವು ಪ್ರಸ್ತಾಪಿಸಿದ್ದೀರಿ, ರಕ್ಷಿತ್ ಶಿವರಾಂ ಕೊಟ್ಟಿದ್ರೆ ಅವರು ದುಡಿದ ಹಣದಲ್ಲಿ ಕೊಟ್ಟಿದ್ದಾರೆ. ನೀವು ಹೇಗೆ ಕೊಟ್ಟಿದ್ದೀರಿ ಎಂದು ಬೆಳ್ತಂಗಡಿಯ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಭವನ ಹಣ ತಡೆಹಿಡಿದಿದ್ದರೆ ದಾಖಲೆ ಕೊಡಿ:
ಬೆಳ್ತಂಗಡಿಯ ಅಂಬೆಡ್ಕರ್ ಭವನಕ್ಕೆ ಮಂಜೂರಾದ ಹಣವನ್ನು ನಮ್ಮ ಪಕ್ಷ ತಡೆ ಹಿಡಿದಿದೆ ಎಂದು ಶಾಸಕರು ಮಾಡಿದ ಆರೋಪದ ಬಗ್ಗೆ ಜಿಲ್ಲಾ ಎಸ್.ಸಿ ಘಟಕದ ಅಧ್ಯಕ್ಷ ಶೇಖರ ಕುಕ್ಕೇಡಿಯವರು ಮಾತನಾಡಿ, ಬೆಳ್ತಂಗಡಿಯಲ್ಲಿ ನೀವು ದೇಶದಲ್ಲಿಯೇ ಮಾದರಿ ಎಂದು ಹೇಳುತ್ತಿರುವ ಅಂಬೆಡ್ಕರ್ ಭವನಕ್ಕೆ ಆರ್.ಟಿ.ಸಿಯೇ ಆಗಿಲ್ಲ, ಈಗಾಗಲೇ ಸರಕಾರದಿಂದ ೮ ಕೋಟಿ ಪ್ರಸ್ತಾವನೆ ಆಗಿ ಸಮಾಜ ಕಲ್ಯಾಣ ಇಲಾಖೆಗೆ ಬಂದಿದೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ನೀಲನಕಾಶೆ ತಯಾರಿಸಿ ಅಂದಾಜು ಪಟ್ಟಿಯನ್ನು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಮೊನ್ನೆ ನಮ್ಮ ಸರಕಾರ ಬಂದ ನಂತರ ದಿನಾಂಕ: 24.08.2023 ರಂದು ಅನುದಾನ ಬಿಡುಗಡೆಗೆ ಪತ್ರ ಬರೆದಿದ್ದೇವೆ. ಆದರೆ ನೀವು ನಿಮ್ಮ ಸರಕಾರದ ಅವಧಿಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿಯವರು ೮ ಕೋಟಿ ಅನುದಾನ ಬಿಡುಗಡೆ ಮಾಡಿರುವುದನ್ನು ಈಗಿನ ನಮ್ಮ ಸರಕಾರ ತಡೆ ಹಿಡಿದಿದೆ ಎಂದು ಹೇಳುವ ಮೂಲಕ ದಲಿತ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದೀರಿ. ನೀವು ಹೇಳಿದ ಹಾಗೆ ನಮ್ಮ ನಾಯಕರಾದಂತಹ ವಸಂತ ಬಂಗೇರ, ರಕ್ಷಿತ್ ಶಿವರಾಂ, ಹರೀಶ್ ಕುಮಾರ್, ಗಂಗಾಧರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಬಂಗೇರ ಹಾಗೂ ನಾಗೇಶ್ ಕುಮಾರ್ ಗೌಡರು ಅಂಬೇಡ್ಕರ್ ಭವನದ ಅನುದಾನ ತಡೆ ಹಿಡಿದಿದ್ದಾರೆ ಎಂಬ ಬಗ್ಗೆ ನಿಮ್ಮಲ್ಲಿ ದಾಖಲೆ ಇದ್ರೆ ತೋರಿಸಿ. ಒಂದು ವೇಳೆ ಸರಕಾರ ತಡೆ ಹಿಡಿದಿದ್ರೆ ನೀವು ಆ ಬಗ್ಗೆ ಅಧಿವೇಶನದಲ್ಲಿ ಯಾಕೆ ಮಾತನಾಡಲಿಲ್ಲ?. ಒಂದು ವೇಳೆ ನಮ್ಮ ಪಕ್ಷ ಅದನ್ನು ತಡೆಹಿಡಿದಿದೆ ಎಂದು ನೀವು ಸಾಬೀತು ಮಾಡಿದ್ರೆ ನಾನು ಕಾಂಗ್ರೇಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ನಿಮ್ಮ ಜೊತೆ ಬರುತ್ತೇನೆ ಎಂದು ಸವಾಲು ಹಾಕಿದರು.
ತಾಲೂಕು ಕ್ರೀಡಾಂಗಣಕ್ಕೆ ಅನುದಾನ ಮಂಜೂರು ಆಗಿಲ್ಲ:
. ತಾಲೂಕು ಕ್ರೀಡಾಂಗಣಕ್ಕೆ ಅಂದಿನ ಸಚಿವರಾದ ಮುನಿರತ್ನರವರು ರೂ 10 ಕೋಟಿ ಬಿಡುಗಡೆ ಮಾಡಿದ್ದು ಅದನ್ನು ರಕ್ಷಿತ್ ಶಿವರಾಂ ತಡೆ ಹಿಡಿದಿದ್ದಾರೆ ಎಂದು ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ನಾವು ಆ ಬಗ್ಗೆ ನಾವು ದಾಖಲೆಗಳನ್ನು ಪರಿಶೀಲಿಸಿದಾಗ ತಾಲೂಕು ಕ್ರೀಡಾಂಗಣಕ್ಕೆ ಇದುವರೆಗೆ 1 ರೂಪಾಯಿ ಅನುದಾನ ಮಂಜೂರಾಗಿಲ್ಲ. ದಾಖಲೆ ಸಮೇತ ನಾವು ಈ ವಿಚಾರ ಮಾತನಾಡುತ್ತಿದ್ದೇವೆ. ಅರಸಿನಮಕ್ಕಿ ಮಾದರಿ ಶಾಲೆಯ ಬಗ್ಗೆ ನಾವು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡಕೊಂಡಿದ್ದು ಅಂತಹ ಯಾವುದೇ ಶಾಲೆ ಅರಸಿನಮಕ್ಕಿಗಾಗಲೀ ಅಥವಾ ತಾಲೂಕಿನ ಇತರೆ ಕಡೆಗಳಿಗಾಗಲಿ ಮಂಜೂರಾದದ್ದೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಶೇಖರ ಕುಕ್ಕೇಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ಕುಮಾರ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಎಸ್.ಸಿ ಘಟಕದ ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಲಾಯಿಲದ ಉಸ್ತುವಾರಿ ಹನೀಫ್, ಅಕ್ರಮ-ಸಕ್ರಮ ಸದಸ್ಯ ಶ್ರೀಧರ ಕಳೆಂಜ, ಸಹಕಾರಿ ಯೂನಿಯನ್ ಅಧ್ಯಕ್ಷ ಅರವಿಂದ ಜೈನ್ ಮಡಂತ್ಯಾರು ಉಪಸ್ಥಿತರಿದ್ದರು.