ಬೆಳ್ತಂಗಡಿ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂಬ ವಿವಾದಿತ ಹೇಳಿಕೆಯನ್ನು ನೀಡಿದ್ದು ಇದನ್ನು ಮಹಿಳಾ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಮತ್ತು ನಾಡಿನ ಸಮಸ್ತ ಮಹಿಳೆಯರಿಗೆ ಕ್ಷಮೆಯನ್ನು ಕೇಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಲೋಕೇಶ್ವರಿ ವಿನಯಚಂದ್ರ ಹೇಳಿದರು.
ಅವರು ಮಹಿಳಾ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ವತಿಯಿಂದ ಏ.15ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.
ಮಹಿಳೆಯರು ಅತ್ಯಂತ ಹೆಚ್ಚು ಜವಾಬ್ದಾರಿ ಇರುವವರು, ಕುಟುಂಬದ ಸುಧಾರಣೆಗೆ ಶ್ರಮಿಸುವವರು, ತಮ್ಮ ಕೈ ಸೇರುವ ಹಣವನ್ನು ಜ್ಞಾನತನದಿಂದ ಸಂಸಾರದ ಉದ್ದಾರಕ್ಕೆ ಬಳಸುವವರು, ವೆಸ್ಟ್ ಎಂಡ್ ವಾಸ್ತವ್ಯ, ರೇಂಜ್ ರೋವರ್ ಓಡಾಟ, ಊರು ತುಂಬಾ ಮನೆ ಹೊಂದಿರುವ ತಮಗೆ ಹೆಣ್ಣುಮಕ್ಕಳ ತ್ಯಾಗ ಹೇಗೆ ಅರ್ಥವಾಗಬಲ್ಲದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪ್ರಶ್ನಿಸಿದರು ಹಾಗೂ ಗ್ಯಾರಂಟಿ ಯೋಜನೆಗಳಿಂದಾದ ಪ್ರಯೋಜನಗಳನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಅಧ್ಯಕ್ಷೆ ನಮಿತಾ ಕೆ ಪೂಜಾರಿ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ಮೆರಿಟಾ ಪಿಂಟೋ ಉಪಸ್ಥಿತರಿದ್ದರು.
ಗ್ರಾಮೀಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ವಂದನಾ ಭಂಡಾರಿ ಸ್ವಾಗತಿಸಿ, ತಾಲೂಕು ಅಕ್ರಮ ಸಕ್ರಮ ಸದಸ್ಯೆ ವಿನುತಾ ರಜತ್ ಗೌಡ ಧನ್ಯವಾದವಿತ್ತರು.