ಲೋಕಸಭಾ ಚುನಾವಣೆಯಲ್ಲಿ ಕೆ. ಆರ್.ಎಸ್. ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಹೇಶ್ ಶೆಟ್ಟಿ ತಿಮರೋಡಿ ರವರಿಗೆ ಮನವಿ

Suddi Udaya

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅನ್ಯಾಯ ಮತ್ತು ತನಿಖೆಯಲ್ಲಿನ ಲೋಪಗಳ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು, ಹಾಗೆಯೆ ಜನಸಾಮಾನ್ಯರಿಗೆ ಈ ವಿಚಾರವನ್ನು ವ್ಯಾಪಕವಾಗಿ ತಲುಪಿಸಿ ಜನಾಭಿಪ್ರಾಯ ಮೂಡಿಸುವಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಯಶಸ್ವಿಯಾಗಿದ್ದಾರೆ ಎಂದು ಕೆ.ಆರ್.ಎಸ್. ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್. ಹೇಳಿದರು.

ಅವರು ಕೆ.ಆರ್.ಎಸ್ ಪಕ್ಷದ ವತಿಯಿಂದ ಏ.16ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ಕೂಡ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಬೆಳ್ತಂಗಡಿಯಿಂದ ಬೆಂಗಳೂರಿಗೆ 330 km ಗಳ 14 ದಿನಗಳ ಪಾದಯಾತ್ರೆಯನ್ನು ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿತ್ತು. ಸೌಜನ್ಯ ಪ್ರಕರಣದಂತೆಯೇ ರಾಜ್ಯಾದ್ಯಂತ ಸಾವಿರಾರು ಅಮಾಯಕರು ಪ್ರತಿನಿತ್ಯ ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ನ್ಯಾಯ ಸಿಗದೆ ನರಳುತ್ತಿದ್ದಾರೆ. ಇಂತಹ ಜನರ ಪರವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಆರಂಭದಿಂದಲೂ ಧ್ವನಿಯಾಗಿದೆ.

ಕೆಆರ್‌ಎಸ್ ಪಕ್ಷವು ರಂಜಿನಿ ಎಂ. ಎಂಬ ಮಹಿಳಾ ಅಭ್ಯರ್ಥಿಯನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ನೋಟಾ ಪರ ನಿಲುವನ್ನು ಬದಲಾಯಿಸಿ, ಕೆಆರ್‌ಎಸ್ ಪಕ್ಷದ ಅಭ್ಯರ್ಥಿಯಾದ ರಂಜಿನಿ ಎಂ. ಅವರನ್ನು ಅಥವಾ ಅವರಿಗಿಂತ ಸೂಕ್ತವಾದ ಅಭ್ಯರ್ಥಿ ಕಣದಲ್ಲಿದ್ದರೆ ಅವರಿಗೆ ಬೆಂಬಲ ನೀಡಬೇಕೆಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ರವರಿಗೆ ಮನವಿ ಮಾಡಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುನಿತಾ ರೆಸಾರಿಯೋ, ಕಾರ್ಯದರ್ಶಿ ಸಿಮಿ, ಕೆ.ಆರ್.ಎಸ್. ಪಕ್ಷದ ಅಭ್ಯರ್ಥಿ ರಂಜಿನಿ ಉಪಸ್ಥಿತರಿದ್ದರು.

ಜಿಲ್ಲಾಧ್ಯಕ್ಷ ವೇಣುಗೋಪಾಲ್ ಸ್ವಾಗತಿಸಿದರು.

Leave a Comment

error: Content is protected !!