ಬೆಳ್ತಂಗಡಿ: ದ.ಕ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಗೆಲ್ಲುವ ಅವಕಾಶ ಹೆಚ್ಚಿದೆ. ಅಭ್ಯರ್ಥಿ ಪದ್ಮರಾಜ್ ಅವರ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಹೇಳಿದ್ದಾರೆ.
ಅವರು ಎ.19 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಯ೯ಕತ೯ರನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಜನರು ಬದಲಾವಣೆಯನ್ನು ಬಯಸಿದ್ದು, ಬಿಜೆಪಿ 400 ಸ್ಥಾನ ಬರುವುದೆಂದು ಪ್ರಚಾರ ಮಾಡಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸುವ ರಾಜಕೀಯ ಮಾಡುತ್ತಿದ್ದಾರೆ. ಇದರ ಬಗ್ಗೆ ಕಾಯ೯ಕತ೯ರು ವಿಚಲಿತ ಆಗಬಾರದು. ಮೋದಿಯವರು 2047ನೇ ಇಸವಿ ಬಗ್ಗೆ ಮಾತನಾಡುತ್ತಾರೆ. ಅವರಿಗೆ ತಮ್ಮ ಸಾಧನೆಗಳ ಬಗ್ಗೆ, ಕನಾ೯ಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ, ಸಮಸ್ಯೆಗಳ ಬಗ್ಗೆ ಯಾವುದೇ ಭಾಷಣದಲ್ಲಿ ಪ್ರಸ್ತಾಪಿಸುವುದಿಲ್ಲ ನಮ್ಮ ಒಂದು ಪ್ರಶ್ನೆಗೂ ಉತ್ತರವಿಲ್ಲ. ಭಾವನಾತ್ಮಕ ವಿಷಯ ಮಾತನಾಡುತ್ತಾರೆ, ಎಲ್ಲಿಯೂ ಪಕ್ಷದ ಹೆಸರನ್ನು ತೆಗೆಯುವುದಿಲ್ಲ, ಅವರ ವ್ಯಕ್ತಿತ್ವ ಬೆಳೆಸಿಕೊಂಡಿದ್ದಾರೆ ಎಂದರು. ಎಲ್ಲಿಯೂ ಮೋದಿ ಆಲೆ ಇಲ್ಲ, ಬಿಜೆಪಿ 200 ಸ್ಥಾನ ಗಳಿಸುವುದು ಕಷ್ಟ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷೀತ್ ಶಿವರಾಂ ಮಾತನಾಡಿ, ಬೆಳ್ತಂಗಡಿ ಕ್ಷೇತ್ರದ 241 ಬೂತುಗಳ ಸಂಪರ್ಕಿಸಲಾಗಿದೆ. ತಾಲೂಕಿನಲ್ಲಿ ಗ್ಯಾರಂಟಿ ಸಮಾವೇಶ ಆಗಿದೆ. ಮಂಗಳೂರು ಸಮಾವೇಶಕ್ಕೆ 60 ಬಸ್ಸುಗಳಲ್ಲಿ ಕಾಯ೯ಕತ೯ರು ಹೋಗಿ ಭಾಗವಹಿಸಿದ್ದರು. ಮೂರು ಬಾರಿ ಅಭ್ಯರ್ಥಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಮುಂದೆ ನನ್ನ ಬೂತು ನನ್ನ ಜವಾಬ್ದಾರಿ ಎಂಬ ಕಾಯ೯ಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಪ್ರಕಾಶ್ ಶೆಣೈ, ದಿವ್ಯಾಲಕ್ಷೀ ಶೆಣೈ, ರೋಹಿತ್, ಪದ್ಮಾನಾಭ, ನಾಸೀರ್ ಪಾಷಾ ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡರು. ಇವರನ್ನು ಪಕ್ಷದ ಧ್ವಜ ನೀಡಿ ಸ್ವಾಗತಿಸಲಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕ ಜೆ.ಆರ್ ಲೋಬೋ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್, ಉಸ್ತುವಾರಿ ಧರಣೇಂದ್ರ ಕುಮಾರ್, ಪ್ರಮುಖರಾದ ಲೋಕೇಶ್ವರೀ ವಿನಯಚಂದ್ರ, ಶೇಖರ ಕುಕ್ಕೇಡಿ, ಕರೀಂ ಗೇರುಕಟ್ಟೆ, ಡಿ.ಜಗದೀಶ್, ಸುಭಾಶ್ಚಂದ್ರ ರೈ, ಈಶ್ವರ ಭಟ್ ಎಂ., ಸುದಶ೯ನ್ ಶೆಟ್ಟಿ, ಜೋಯಿಸನ್, ನಮಿತಾ ಪೂಜಾರಿ, ನೇಮಿರಾಜ ಕಿಲ್ಲೂರು, ಆಶ್ರಫ್ ನೆರಿಯ, ವಸಂತ ಬಿ.ಕೆ ಮೊದಲಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಸತೀಶ್ ಕಾಶಿಪಟ್ನ ಸ್ವಾಗತಿಸಿ, ನಿರೂಪಿಸಿದರು.
ಬಳಿಕ ಸಚಿವರು ಲಾಯಿಲ ವೆಂಕಟರಮಣ ದೇವಸ್ಥಾನ, ಬಿಷಫ್ ಹೌಸ್, ಗುರುವಾಯನಕೆರೆ ಮಸೀದಿಗೆ ಭೇಟಿ ನೀಡಿದರು.