ಬೆಳ್ತಂಗಡಿ; ತಾಲೂಕಿನ ಯುವಕರು ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೇ ಸಾಧಕರಾಗಿದ್ದು ಹೊರ ಪ್ರಪಂಚಕ್ಕೆ ಬಾರದೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರೂ ಯಶಸ್ವಿ ಉದ್ಯಮಿಗಳಾಗಿ ಗುರುತಿಸಿಕೊಳ್ಳಬೇಕು. ಅಭಿವೃದ್ಧಿ ಎಂಬುದು ಬರೀ ಬಾಯಿ ಮಾತಾಗಬಾರದು. ಅಬ್ದುಲ್ ರಶೀದ್ ಅವರು ಈ ಸುಂದರ ಸಭಾಂಗಣ ನಿರ್ಮಿಸುವ ಮೂಲಕ ಅಭಿವೃದ್ಧಿಯ ಪರಿಕಲ್ಪನೆಯನ್ನು ಸಾಕ್ಷಾತ್ಕರಿಸಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅಭಿಪ್ರಾಯಪಟ್ಟರು.
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮಂಜುಬೆಟ್ಟು ಎಂಬಲ್ಲಿ ನಿರ್ಮಿಸಿದ ಎಫ್.ಎಂ ಗಾರ್ಡನ್ ಸಂಪೂರ್ಣ ಹವಾನಿಯಂತ್ರಿತ ಎ.ಸಿ ಸಭಾಂಗಣವನ್ನು ಏ.28 ರಂದು ಉದ್ಘಾಟಿಸಿ ಅವರು ಮಾತನಾಡಿದರು. ಯುವಜರು ಉದ್ಯಮಿಗಳಾಗಿ ಹೊರಹೊಮ್ಮಬೇಕು. ಆ ಮೂಲಕ ನಮ್ಮ ಆಸುಪಾಸಿನಲ್ಲೇ ಉದ್ಯೋಗ ಸೃಷ್ಟಿ ಮಾಡಬೇಕು. ಇಂತಹಾ ಅನೇಕ ಯೋಜನೆಗಳು ಈ ಪ್ರದೇಶಕ್ಕೆ ಬೇಕು. ವಿಶಾಲವಾದ ಮತ್ತು ವ್ಯವಸ್ಥಿತವಾದ ಇಂತಹಾ ಸಭಾಂಗಣ ತಾಲೂಕಿಗೆ ಅತೀ ಅಗತ್ಯವಾಗಿ ಬೇಕಿತ್ತು. ಆ ಬೇಡಿಕೆಯನ್ನು ಎಫ್.ಎಂ ಗಾರ್ಡನ್ ಮೂಲಕ ಅಬ್ದುಲ್ ರಶೀದ್ ಅವರು ಸಾಕಾರಗೊಳಿಸಿದ್ದಾರೆ ಎಂದರು.
ಮುಖ್ಯ ಅತಿಥಿ ಎಕ್ಸೆಲ್ ವಿದ್ಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ, ಊರಿನ ಅಭಿವೃದ್ಧಿಗೆ ಇಂತಹ ಹೊಸತನದ ಪ್ರಯೋಗಗಳು ಬೇಕಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನಾವೂ ಹೆಜ್ಜೆ ಇಟ್ಟಿದ್ದು ಇದಕ್ಕೆಲ್ಲ ಈ ನಾಡಿನ ಜನತೆಯ ಆಶೀರ್ವಾದ ಬಹಳ ಅಗತ್ಯ. ಇವುಗಳೆಲ್ಲವೂ ಊರಿನ ಅಭಿವೃದ್ಧಿಯ ಸಂಕೇತವಾಗುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಎಸ್‌ಡಿಪಿಐ ಬೆಳ್ತಂಗಡಿ ಅಸೆಂಬ್ಲಿ ಅಧ್ಯಕ್ಷ ನವಾಝ್ ಶರೀಫ್ ಕಟ್ಟೆ ಮಾತನಾಡಿ, ಗ್ರಾಮೀಣ ಪ್ರದೇಶವಾಗಿರುವ ಬೆಳ್ತಂಗಡಿಯಲ್ಲಿ ಇಂತಹ ಒಂದು ಭವ್ಯ ಸಭಾಂಗಣ ನಿರ್ಮಾಣವಾಗಿರುವುದು ಸರ್ವ ನಾಗರಿಕರಿಗೆ ಹೆಮ್ಮೆ.ಇಲ್ಲಿ ಹಗಲು ಮಾತ್ರವಲ್ಲದೆ ರಾತ್ರಿಯೂ ಕಾರ್ಯಕ್ರಮ ನಡೆಸುವ ಸೌಕರ್ಯವಿದೆ. ಜತೆಗೆ ಅಷ್ಟೇ ವಿಶಾಲ ವಾಹನ ಪಾರ್ಕಿಂಗ್ ಸೌಲಭ್ಯವೂ ಇದೆ ಎಂಬುದು ಪರಿಪೂರ್ಣತೆಯ ಸೂಚಕ ಎಂದರು.
ಎಸ್.ಎಂ.ಎಸ್ ಶಾಮಿಯಾನ ಮತ್ತು ಈವೆಂಟ್ಸ್ ಸಂಸ್ಥೆಯ ಮುಖ್ಯಸ್ಥ ಹಾಜಿ ಅಬ್ದುಲ್ ಲೆತೀಫ್ ಮಾತನಾಡಿ, ತಮ್ಮೂರನ್ನೇ ಕೇಂದ್ರೀಕರಿಸಿ ಅಬ್ದುಲ್ ರಶೀದ್ ಅವರು ಹೂಡಿಕೆ ಮಾಡಿದ್ದಾರೆ. ಜನರ ವಿಶ್ವಾಸ ಗಳಿಸಿ ಈ ಕ್ಷೇತ್ರದಲ್ಲಿ ಅವರು ಯಶಸ್ಸು ಕಾಣುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ ಎಂದರು.
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ನಝೀರ್ ಮಠ ಶುಭ ಹಾರೈಸಿದರು.
ವೇದಿಕೆಯಲ್ಲಿ ಕುವೆಟ್ಟು ಗ್ರಾ.ಪಂ ಸದಸ್ಯ ಶಮೀವುಲ್ಲ, ನ್ಯಾಷನಲ್ ಇನ್ಶ್ಯೂರೆನ್ಸ್ ಕಂಪೆನಿಯ ಅಭಿವೃದ್ಧಿ ಅಧಿಕಾರಿ ಜೋನ್ ಅರ್ವಿನ್ ಡಿಸೋಜಾ, ಸಂಸ್ಥೆಯ ಮಾಲಿಕರ ತಂದೆಯವರಾದ ಬಿ ಅಬ್ಬಾಸ್ ದಿಲ್‌ದಾರ್ ಉಪಸ್ಥಿತರಿದ್ದರು.
ಇಂಜಿನಿಯರ್ ಸಾದಿಕ್ ಮದ್ದಡ್ಕ ಅವರನ್ನು ಸನ್ಮಾನಿಸಲಾಯಿತು.
ಎಫ್.ಎಮ್ ಗಾರ್ಡನ್ ಮಾಲಿಕ ಅಬ್ದುಲ್ ರಶೀದ್ ಫನಾತೀರ್ ಮಾಲ್ ಅಧ್ಯಕ್ಷತೆ ವಹಿಸಿದ್ದು ಎಲ್ಲರನ್ನೂ ಬರಮಾಡಿಕೊಂಡು ಗೌರವಿಸಿದರು. ಇಡೀ ಕಟ್ಟಡದ ವಿನ್ಯಾಸ ರಚಿಸಿ ಕಾಮಗಾರಿ ರೂಪಿಸಿದ ಇಂಜಿನಿಯರ್, ಸಾಗರ್ ಕನ್ಸ್‌ಟ್ರಕ್ಷನ್ಸ್ ಮಾಲಕ ಸಾದಿಕ್ ಮದ್ದಡ್ ಅವರನ್ನು ಗೌರವಿಸಲಾಯಿತು. ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಹೆಚ್ ಮುಹಮ್ಮದ್ ವೇಣೂರು ಧನ್ಯವಾದವಿತ್ತರು.
ಉದ್ಘಾಟನೆಯ ವಿಶೇಷತೆಗಳು:
ಉದ್ಘಾಟನೆಯ ನಿಮಿತ್ತ ಸಭಾಂಗಣದ ವೀಕ್ಷಣೆಗೆ ಸಂಜೆ 5 ಗಂಟೆಯಿಂದಲೇ ಜನರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿತ್ತು. ಸ್ಥಳದಲ್ಲೇ ತಯಾರಿಸಿದ ಬಗೆಬಗೆಯ ಹಣ್ಣಿನ ಪಾನೀಯಗಳು, ಪಾನಿ ಪೂರಿ, ಮಸಾಲಪೂರಿ, ದಹಿ ಪೂರಿ ಸಹಿತ ಚಾಟ್ಸ್ ಕೌಂಟರ್, ಕೇರಳ ಮಾದರಿಯ ಮಾಂಸಾಹಾರಿ ಊಟೋಪಚಾರ ಜೊತೆಗೆ, ಶುದ್ಧ ಸಸ್ಯಾಹಾರಿ ಔತಣ ವ್ಯವಸ್ಥೆ ಪ್ರತ್ಯೇಕ ಮಾಡಲಾಗಿತ್ತು. ಸುಮಾರು 3500 ರಷ್ಟು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಎಲ್.ಇ.ಡಿ ಪರದೆಯ ಮೂಲಕವೂ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮಂಗಳೂರಿನ ಪ್ರಖ್ಯಾತ ತಂಡದಿಂದ ಸಂಗೀತ ರಸಮಂಜರಿ ಏರ್ಪಡಿಸಲಾಗಿತ್ತು. ಜನ ಎಲ್ಲಾ ಕಾರ್ಯಕ್ರಮಗಳನ್ನು ಆಸ್ವಾದಿಸಿದರು.
ಉದ್ಘಾಟನೆಯ ಪ್ರಯುಕ್ತ ಕಾಜೂರು ತಂಙಳ್ ದುಆ ಪ್ರಾರ್ಥನೆ ನೆರವೇರಿಸಿದರು. ಗುರುವಾಯನಕೆರೆ ಮುದರ್ರಿಸ್ ಜುನೈದ್ ಸಖಾಫಿ, ಸುನ್ನತ್‌ಕೆರೆ ಮಸ್ಜಿದ್ ಖತೀಬ್ ಎಂ.ಕೆ ಅಬೂಬಕ್ಕರ್ ಸಿದ್ದೀಕ್ ಹಿಮಮಿ ಅಲ್ ಫುರ್ಖಾನಿ ರಶೀದಿ, ಶರೀಫ್ ಝುಹುರಿ ಮೊದಲಾದವರ ಉಪಸ್ಥಿತಿಯಲ್ಲಿ ಮೌಲೀದ್ ಮಜ್ಲಿಸ್ ನಡೆಯಿತು. ಮಾಲಿಕರ ಕುಟುಂಬವರ್ಗದವರು ಉಪಸ್ಥಿತರಿದ್ದರು.
ಸಭಾಂಗಣದ ವಿಶೇಷತೆ;
12 ಎಕ್ರೆ ವಿಸ್ತೀರ್ಣದ ಒಟ್ಟು ಪ್ರದೇಶದಲ್ಲಿ ಕೃಷಿ ತೋಟದ ಮಧ್ಯೆ 35 ಸಾವಿರ ಚದರ ಅಡಿ ವಿಸ್ತೀರ್ಣದ ಕ್ಯಾಂಪಸ್ ಒಳಗೊಂಡ ಭವ್ಯ ಸಭಾಂಗಣ ಇದಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಎ.ಸಿ ಸಭಾಂಗಣ, ವೇದಿಕೆಯ ಕಾರ್ಯಕ್ರಮ ಮಹಿಳೆಯರಿಗೂ ವೀಕ್ಷಿಸಲು ಎಲ್.ಇ.ಡಿ ಪರದೆಯ ಮೂಲಕ ಲೈವ್ ಕ್ಯಾಮರಾ, 1 ಸಾವಿರ ಚದರ ಅಡಿ, 700 ಚದರ ಅಡಿಯ ಪ್ರತ್ಯೇಕ ವೇದಿಕೆಗಳು, ಮುಖ್ಯ ವೇದಿಕೆಯ ಇಕ್ಕೆಲಗಳಲ್ಲೂ ಗ್ರೀನ್ ರೂಂ, 600 ಮಂದಿಗೆ ಏಕಕಾಲದಲ್ಲಿ ಊಟಕ್ಕೆ ಸೌಕರ್ಯವಿರುವ ಡೈನಿಂಗ್ ಹಾಲ್,
ಮಹಿಳೆಯರು -ಪುರುಷರಿಗೆ ಪ್ರತ್ಯೇಕ ಡೈನಿಂಗ್ ಹಾಲ್, ಅಷ್ಟೇ ವಿಶಾಲವಾದ ಪಾಕ ಶಾಲೆ, ಮುಖ್ಯ ರಸ್ತೆಯಿಂದ ಕೇವಲ 300 ಮೀಟರ್ ಒಳಗಿನ ಸುಂದರ ಪರಿಸರ, ಸಭಾಂಗಣಕ್ಕೆ ತೆರಳಲು ಹೊಚ್ಚ ಹೊಸ ಡಾಂಬರು ರಸ್ತೆ, 600 ವಾಹನ ನಿಲ್ಲಿಸಲು ಸೌಕರ್ಯವಿರುವ ವಿಶಾಲ ಪಾರ್ಕಿಂಗ್, 20 ಸಾವಿರ ಚದರ ಅಡಿ ಗಾರ್ಡನ್ ಏರಿಯಾ, ಇಳಿ ಸಂಜೆ ಕಾರ್ಯಕ್ರಮ ಆಯೋಜಿಸಲು ಓಪನ್ ಗಾರ್ಡನ್, ಸ್ಟೇಜ್ ವ್ಯವಸ್ಥೆ,, 3 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಮಂದಿಯ ಸಾಮರ್ಥ್ಯದ ಕಾರ್ಯಕ್ರಮ ಆಯೋಜನೆಗೆ ಅವಕಾಶ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಅತ್ಯಾಧುನಿಕ ಶೌಚಾಲಯ, ವರ್ಣ ರಂಜಿತ ಬೆಳಕು ಮತ್ತು ಧ್ವನಿ (ಸೌಂಡ್ಸ್ & ಲೈಟಿಂಗ್ಸ್) ಸಂಯೋಜನೆಯ ಮೂಲಕ ಈ ಎಫ್. ಎಮ್ ಗಾರ್ಡನ್ ಸಭಾಂಗಣ ಎಲ್ಲರ ಗಮನ ಸೆಳೆಯುತ್ತಿದೆ.