ಧರ್ಮಸ್ಥಳ : ಧರ್ಮಸ್ಥಳದಲ್ಲಿ ಮೇ 1 ರಂದು ಬುಧವಾರ ಸಂಜೆ ಗಂಟೆ 6.45 ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 52 ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.
ಈಗಾಗಲೆ 123 ಜೊತೆ ವಧು-ವರರು ವಿವಾಹಕ್ಕೆ ಹೆಸರು ನೋಂದಾಯಿಸಿ ಅವರು ನೀಡಿದ ಪ್ರಮಾಣಪತ್ರಗಳು ಕ್ರಮಬದ್ಧವಾಗಿದ್ದಲ್ಲಿ ಸಾಮೂಹಿಕ ವಿವಾಹದಲ್ಲಿ ಮದುವೆಗೆ ಅವಕಾಶ ನೀಡಲಾಗುವುದು.
ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಮತ್ತು ಮಂಗಳಸೂತ್ರ ನೀಡಲಾಗುವುದು.
ಬೆಳಿಗ್ಗೆ ಯಿಂದಲೆ ಧರ್ಮಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಧು-ವರರಿಗೆ ಸೀರೆ, ರವಿಕೆಕಣ, ಧೋತಿ ಮತ್ತು ಶಾಲು ವಿತರಿಸುವರು.
ಸಂಜೆ 5 ಗಂಟೆಗೆ ವಧೂ-ವರರು ಭವ್ಯ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ಹೋಗುವರು. ಅಲ್ಲಿ ಅವರವರ ಜಾತಿಸಂಪ್ರದಾಯದಂತೆ ಒಂದೇ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯುತ್ತದೆ.
ಹೆಗ್ಗಡೆಯವರು ಹಾಗೂ ಚಲನಚಿತ್ರನಟ ದೊಡ್ಡಣ್ಣ ಶುಭಾಶಂಸನೆ ಮಾಡುವರು. ಬಳಿಕ ನೂತನ ದಂಪತಿಗಳು ದೇವರದರ್ಶನ ಮಾಡಿ, ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ಊರಿಗೆ ತೆರಳುವರು.
ಸಾಮೂಹಿಕ ವಿವಾಹದಲ್ಲಿ ಮದುವೆ ಆದವರಿಗೆ ಸರ್ಕಾರದ ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲಾಗುವುದು.
ವರದಕ್ಷಿಣೆ ಹಾಗೂ ಮದುವೆಗಾಗುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದಲ್ಲಿ 1972ರಲ್ಲಿ ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದು, ಪ್ರತಿ ವರ್ಷ ಇದನ್ನು ನಡೆಸಲಾಗುತ್ತದೆ. ಕಳೆದ ವರ್ಷದ ವರೆಗೆ 12777 ಜೊತೆ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದು, ಸುಖ-ಶಾಂತಿ, ನೆಮ್ಮದಿಯ ದಾಂಪತ್ಯಜೀವನ ನಡೆಸುತ್ತಿದ್ದಾರೆ.