30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡ್ಲೆ: 24 ನೇ ವರ್ಷದ ಕರುಂಬಿತ್ತಿಲು ಸಂಗೀತ ಶಿಬಿರ ಸಮಾರೋಪ

ಕೊಕ್ಕಡ:ಮನೆಗಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕರಂಬಿತ್ತಿಲು ಸಂಗೀತ ಶಿಬಿರದಂತಹ ಸನಿವಾಸ ಶಿಬಿರಗಳು ವಿದ್ಯೆಯ ಜತೆಗೆ ಸಂಸ್ಕಾರ ಹೇಳಿಕೊಡುತ್ತದೆ. ಇಲ್ಲಿ ಸಂಸ್ಕಾರ ಆದರ್ಶವಾಗಿ ಮಾರ್ಪಾಡುಗೊಳ್ಳುತ್ತದೆ. ಸಾಧನೆ ಮಾಡಿದಲ್ಲಿ ಎಲ್ಲರೂ ಕಲಾವಿದರಾಗಬಹುದು. ಸಂಗೀತ ಭಾರತೀಯ ಸಂಸ್ಕೃತಿಯ ಪ್ರತೀಕ. ಶಿಬಿರಾರ್ಥಿಗಳು ಸಂಗೀತದ ರಾಯಭಾರಿಗಳಾಗಿ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ನುಡಿದರು.


ಅವರು ಮೇ 19 ರಂದು ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲು ಮನೆಯಂಗಳದಲ್ಲಿ ನಡೆದ 24 ನೇ ವರ್ಷದ 5 ದಿನಗಳ ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು. ಧಾರ್ಮಿಕತೆಯಿಲ್ಲದೆ ಕಲಾಪ್ರಕಾರಗಳಿಲ್ಲ, ಕಲಾಪ್ರಕಾರಗಳಿಲ್ಲದೆ ಧಾರ್ಮಿಕತೆಯಿಲ್ಲ. ಪರಿಸರದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಸುಂದರ ಪರಿಸರದ ಮನೆಯಂಗಳದಲ್ಲಿ ಅಂತಾರಾಷ್ಟ್ರೀಯ ಕಲಾವಿದರನ್ನು ಕರೆಸಿ ಪ್ರತಿ ವರ್ಷ ಸಂಗೀತ ಶಿಬಿರ ನಡೆಸುತ್ತಿರುವುದು ವಿಠ್ಠಲ ರಾಮಮೂರ್ತಿಯವರ ವಿಶೇಷ ಸಾಧನೆ. ಅವರು ಕಲೆಯ ವಿದ್ಯೆಯನ್ನು ಕರಗತ ಮಾಡಿಕೊಂಡು ಅದರಲ್ಲಿ ಪರಿಣತಿ ಸಾಧಿಸಿದ್ದಾರೆ. ಭಕ್ತಿಯ ಕೇಂದ್ರವಾದ ಧರ್ಮಸ್ಥಳದಲ್ಲಿ ಡಾ.ಹೆಗ್ಗಡೆಯವರು ಸಂಗೀತದ ಅಭಿರುಚಿ ಹೊಂದಿ ಶ್ರೇಷ್ಠ ಕಲಾವಿದರನ್ನು ಕರೆಸಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿ ಕಲಾಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದಾರೆ. ಡಾ| ಹೆಗ್ಗಡೆಯವರಿಗೆ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡಲು ಅರೋಗ್ಯ ಭಾಗ್ಯ, ಶಕ್ತಿಯನ್ನು ಕರುಣಿಸಲಿ ಎಂದು ನುಡಿದರು.


ಸಂಗೀತದ ಆನಂದ ಅನುಭವಿಸಬೇಕು: ಡಾ!ಹೆಗ್ಗಡೆ ಸಂಗೀತದಿಂದ ಸಂಸ್ಕೃತಿ, ಸಂಸ್ಕಾರ ಉದ್ದೀಪನಗೊಳ್ಳುವುದು. ಚಂಚಲ ಮನಸ್ಸು, ಇಂದ್ರಿಯಗಳನ್ನು ನಿಗ್ರಹಿಸಿ ಎಲ್ಲ ಮರೆತು ಸಂಗೀತದ ಆನಂದ ಅನುಭವಿಸಬೇಕು. ಅದನ್ನು ಕಷ್ಟಪಟ್ಟು ಕೇಳುವ ಅನಿವಾರ್ಯತೆಯಿಲ್ಲ. ಇಲ್ಲಿ ಸುಂದರ ಪರಿಸರದ ವಾತಾವರಣ ಸೃಷ್ಟಿಯಾಗಿದ್ದು ಇಲ್ಲಿಯ ಆ ನಂದ ಬೇರೆ ಕಡೆಗಳಲ್ಲಿಲ್ಲ. ಸಂಗೀತದ ಸ್ವಾದವನ್ನು ಆರಾಧಿಸುವುದು, ಅನುಭವಿಸುವುದು ಮುಖ್ಯ. ನಾವು ಯಾವುದೇ ದೋಷಗಳನ್ನು ಹುಡುಕದೆ ಗುಣಗ್ರಾಹಿಗಳಾಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ! ಡಿ.ವೀರೇಂದ್ರ ಹೆಗ್ಗಡೆಯವರು ನುಡಿದರು.


ಕರುಂಬಿತ್ತಿಲು ಕುಟುಂಬಸ್ಥರ ಪರವಾಗಿ ಕಲಾವಿದ ವಿಠ್ಠಲ ರಾಮಮೂರ್ತಿ, ಅವರ ತಾಯಿ ಕೃಷ್ಣವೇಣಿ, ಪತ್ನಿ ಚಂದ್ರಿಕಾ, ಕಲಾಶ್ರೀ ರಾಜರಾಜೇಶ್ವರಿ ಮೊದಲಾದವರು ಪೂಜ್ಯ ಶ್ರೀಗಳವರನ್ನು ಹಾಗು ಡಾ!ಹೆಗ್ಗಡೆಯವರನ್ನು ಶಾಲು ಹೊದಿಸಿ, ಗೌರವಿಸಿದರು. ಸ್ವಾಮೀಜಿಯವರು ಕುಟುಂಬಸ್ಥರನ್ನು ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಸ್ವಾಗತಿಸಿ, ಪ್ರಸ್ತಾವಿಸಿದ ವಿಠ್ಠಲ ರಾಮಮೂರ್ತಿಯವರು 10 ಮಕ್ಕಳೊಂದಿಗೆ ಮನೆಯಲ್ಲಿ ಪ್ರಾರಂಭಿಸಿದ ಸಂಗೀತ ಶಿಬಿರ 24ನೇ ವರ್ಷದಲ್ಲಿ 300ಕ್ಕೂ ಹೆಚ್ಚು ಸಂಗೀತಾಸಕ್ತ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ನಾಡಿನ ಶ್ರೇಷ್ಠ ಕಲಾವಿದರನ್ನು ಕರೆಸಿ ಸಂಗೀತಾಸಕ್ತರಿಗೆ ತರಬೇತಿ, ಮಾರ್ಗದರ್ಶನ ನೀಡಲಾಗುತ್ತಿದೆ. ಮುಂದಿನ ವರ್ಷ ರಜತ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಯೋಜನೆಯಿದ್ದು ಶ್ರೀಗಳವರ ಅಪೇಕ್ಷೆಯಂತೆ ಒಂದು ದಿನ ಎಡನೀರು ಮಠದಲ್ಲೂ, ಒಂದು ದಿನ ವಿಶಾಖಪಟ್ಟಣದಲ್ಲೂ ಸಂಗೀತ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದೇವೆ ಎಂದರು.

ಬೆಳಿಗ್ಗೆ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗು ಖ್ಯಾತ ವೀಣಾವಾದಕ ರಮಣ ಬಾಲಚಂದ್ರನ್ ಅವರಿಂದ ವೀಣಾವಾದನ ನಡೆಯಿತು. ವಿ.ವಿ. ರಮಣಮೂರ್ತಿ ಮೃದಂಗದಲ್ಲಿ ಸಾಥ್ ನೀಡಿದರು. ಧರ್ಮಸ್ಥಳದ ಸೀತಾರಾಮ ತೋಳ್ಪಡಿತ್ತಾಯ ಭಾಗವಹಿಸಿದ್ದರು.

ಸಂಗೀತ ಶಿಬಿರವನ್ನು ಮೇ.15ರಂದು ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಗಳವರು ಉದ್ಘಾಟಿಸಿ ಶುಭ ಕೋರಿದ್ದರು. ಖ್ಯಾತ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ತಂಡದವರಿಂದ ಯಕ್ಷಗಾನ ವೈಭವ ನಡೆಯಿತು. ಶಿಬಿರದಲ್ಲಿ ಖ್ಯಾತ ಸಂಗೀತ ದಿಗ್ಗಜರಾದ ಟಿ.ವಿ.ರಾಮಪ್ರಸಾದ್, ವಿಠ್ಠಲ್ ರಂಗನ್, ಎಂ.ಎಸ್ ವರದನ್, ಪಯ್ಯನೂರು ಗೋವಿಂದಪ್ರಸಾದ್, ವೈ.ಜಿ ಶ್ರೀಲತಾ,ನಿಕ್ಷಿತ್ ಪೂತ್ತೂರ್, ಅಭಿಷೇಕ್ ರಘುರಾಂ, ಸುಂದರಕುಮಾರ್, ಎಚ್.ಎನ್.ಭಾಸ್ಕರ್, ಹನುಮಂತಪುರಂ ಭೂವರಾಹಂ, ವಿ.ವಿ.ರಮಣಮೂರ್ತಿ ಮೊದಲಾದ ಖ್ಯಾತ ಕಲಾವಿದರು ತಮ್ಮ ಸಂಗೀತ ಕಾರ್ಯಕ್ರಮದ ಮೂಲಕ ಶಿಬಿರಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

Related posts

ಭಾರಿ ಮಳೆ ನಾಳೆ (ಜೂ.27) ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Suddi Udaya

ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನವರಾತ್ರಿಯ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಗಳಿಂದ ಬೆಳ್ತಂಗಡಿಯಲ್ಲಿ ಪಥಸಂಚಲನ

Suddi Udaya

ಕಳಿಯ : ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜು – ಸಂಸ್ಕೃತ ಅಂತರಾಧ್ಯಯನ ವೃತ್ತದ ಸಂಯೋಜಕರಾಗಿ ಅಂಜಲಿ ಹಾಗೂ ಪ್ರೀತಮ್ ಮೆನೇಜಸ್ ಆಯ್ಕೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ: ಚಂಡಿಕಾ ಹೋಮ, ಪ್ರಸನ್ನಪೂಜೆ, ಪಾದಪೂಜೆ

Suddi Udaya
error: Content is protected !!