ಗುರುವಾಯನಕೆರೆ: ಸಾರಸ್ವತ ಲೋಕದಲ್ಲಿ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಕ್ಸೆಲ್ ವಿದ್ಯಾಸಂಸ್ಥೆಯು ‘ಅಕ್ಷರೋತ್ಸವ’ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಮೇ.22 ರಂದು ಅಮೃತ ಸೋಮೇಶ್ವರ ವೇದಿಕೆ ಕೆ.ಟಿ ಗಟ್ಟಿ ಸಭಾಂಗಣ ಎಕ್ಸೆಲ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆರಂಭಗೊಂಡಿತು.
ಸಮ್ಮೇಳನವನ್ನು ಖ್ಯಾತ ಸಾಹಿತಿಗಳಾದ ಡಾ. ನರಹಳ್ಳಿ ಬಾಲಸುಬ್ರಮಣ್ಯರವರು ದೀಪ ಪ್ರಜ್ವಲಿಸಿ, ತೆಂಗಿನ ಹಿಂಗಾರ ಅರಳಿಸಿ ಉದ್ಘಾಟಿಸಿದರು.
ನೂರಕ್ಕೂ ಹೆಚ್ಚಿನ ಉದಯೋನ್ಮುಖ ಕವಿ- ಕವಯಿತ್ರಿಯರ ರಚನಾತ್ಮಕ ಕವನಗಳನ್ನೊಳಗೊಂಡ ಕವಿತೆಗಳ ಸಂಗ್ರಹಾತ್ಮಕ ಪುಸ್ತಕವಾದ ‘ ಅಕ್ಕರೆಯ ಕವಿತೆಗಳು ‘ ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವರಾದ ಡಾ. ಸುಬ್ಬಣ್ಣ ರೈ ಲೋಕಾರ್ಪಣೆಗೊಳಿಸಿದರು.
ನಾಡಿನ ಖ್ಯಾತ ಗಣಿತ ತಜ್ಞರಾದ ಹಾಗೂ ಎಕ್ಸೆಲ್ ಸಂಸ್ಥೆಯ ಕಾರ್ಯದರ್ಶಿಗಳು ಮತ್ತು ಪ್ರಾಧ್ಯಾಪಕರಾಗಿರುವ ಅಭಿರಾಮ್ ಬಿ.ಎಸ್ ರವರ “ಅಚೀವರ್ಸ್ ಮ್ಯಾಥಮೆಟಿಕ್ಸ್” ಪಠ್ಯ ಪುಸ್ತಕದ ಲೋಕಾರ್ಪಣೆಯನ್ನು, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಶ್ರೀನಾಥ್ ಎಂ.ಪಿ ನೇರವೇರಿಸಿದರು.
ಎಕ್ಸೆಲ್ ವಿದ್ಯಾ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರಭಾಕರ್ ರವರು ಬರೆದ “ಕಂಪ್ಯೂಟರ್ ಸೈನ್ಸ್ ಸ್ಕ್ಯಾನರ್” ಪಠ್ಯಪುಸ್ತಕದ ಲೋಕಾರ್ಪಣೆಯನ್ನು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಸುವರ್ಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸೆಲ್ ಸಂಸ್ಥೆಯ ಸಂಸ್ಥಾಪಕರಾದ ಸುಮಂತ್ ಕುಮಾರ್ ಜೈನ್ ರವರು ವಹಿಸಿದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ ಬಿ.ಎಸ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಸಂಸ್ಥೆಯಿಂದ ಪ್ರತಿವರ್ಷ ಕೊಡಲ್ಪಡುವ “ಎಕ್ಸೆಲ್ ಅಕ್ಷರ ಗೌರವ ಸಮರ್ಪಣಾ” ದಡಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುವ ಕಾಯ೯ಕ್ರಮ ನಡೆಯಲಿದೆ.
ರೈತರನ್ನು ಅನ್ನದಾತರೆಂದು ಗೌರವಿಸಿ ಬಿ.ಕೆ. ದೇವರಾವ್ , ಸಾಹಿತ್ಯ ಪ್ರೀತಿಗೆ ಡಾ. ಬಿ. ಜನಾರ್ದನ ಭಟ್ , ಸಂಶೋಧನಾ ಕ್ಷೇತ್ರದಲ್ಲಿ ಡಾ. ಉಮಾನಾಥ ಶೆಣೈ, ನಾಟಕ ರಂಗದಲ್ಲಿ ಶ್ರೀ ಗುರುರಾಜ್ ಮಾರ್ಪಳ್ಳಿ , ಯಕ್ಷಗಾನ ರಂಗದ ಶ್ರೀ ಅರುವ ಕೊರಗಪ್ಪ ಶೆಟ್ಟಿ, ದೈವ ನರ್ತಕರಾದ ಲೋಕಯ್ಯ ಸೇರ ಹಾಗೂ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಅಂಕಿತ ಪ್ರಕಾಶನದ ಶ್ರೀ ಪ್ರಕಾಶ್ ಕಂಬತ್ತಳ್ಳಿಯವರಿಗೆ ನೀಡಲಾಗುವುದು.
ಮಧ್ಯಾಹ್ನ ಬಳಿಕ ಕವಿತೆ ವಾಚನ – ಗಾಯನ – ನೃತ್ಯ – ಕುಂಚ ಕಾರ್ಯಕ್ರಮದಲ್ಲಿ ನಾಡಿನ 25 ಕವಿತೆಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ಕವಿ, ಸಾಹಿತಿ ಮುದ್ದು ಮೂಡುಬೆಳ್ಳೆ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಹೊತ್ತಿಗೆ ಮೂರು ಮುತ್ತು ಖ್ಯಾತಿಯ ಕುಳ್ಳಪ್ಪು ತಂಡದಿಂದ ,’ ಹೇ ದೇವ್ರೆ ಗಿರಾಕಿಯೇ ಇಲ್ಲ ಮಾರಾಯ ‘ ಎನ್ನುವ ನಗೆ ನಾಟಕ ನಡೆಯಲಿದೆ.