ಉಜಿರೆ: ಇಲ್ಲಿನ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 23 ರಂದು ಶಿಶಿಕ್ಷು ತರಬೇತಿ ಮಾಹಿತಿ ಕಾರ್ಯಾಗಾರ ನಡೆಯಿತು.
ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಸರಕಾರಿ ಐಟಿಐ ಪ್ರಾಂಶುಪಾಲ ಹಾಗೂ ಬೆಳ್ತಂಗಡಿ ತಾಲೂಕು ಸಹಾಯಕ ಶಿಶಿಕ್ಷು ಸಲಹೆಗಾರ ರಮೇಶ್ ನಾಯ್ಕ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐಟಿಐ ಶಿಕ್ಷಣ ಪೂರೈಸಿದ ಕೂಡಲೇ ಶಿಶಿಕ್ಷು ತರಬೇತಿ ಪಡೆದುಕೊಂಡು ಯಾವುದೇ ಸರಕಾರಿ, ಅರೆ ಸರಕಾರಿ ಅಥವಾ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಹೋಗುವುದು ಉತ್ತಮ ಎಂದು ಸಲಹೆ ನೀಡಿದರು.
ಐಟಿಐ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನ್ಯಾಪ್ಸ್ (National Apprenticeship Promotion Scheme- NAPS) ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಾಗ ಅವರಿಗೆ ಆಯ್ದ ಕಂಪೆನಿಗಳಿಂದ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವ ಅಪ್ರಂಟಿಶಿಪ್ ತರಬೇತಿಗೆ ಅವಕಾಶ ಮಾಡಿಕೊಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಕಂಪೆನಿಗಳಲ್ಲಿ ಶಿಷ್ಯವೇತನ ನೀಡಲಾಗುತ್ತದೆ. ವರ್ಷದ ಕೊನೆಯಲ್ಲಿ ಪರೀಕ್ಷೆ ನಡೆಸಿ ಕೇಂದ್ರ ಸರಕಾರ ನೀಡಲ್ಪಟ್ಟ ಪ್ರಮಾಣಪತ್ರ ನೀಡಲಾಗುವುದು ಎಂದು ಅವರು ತಿಳಿಸಿದರು.
ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಸಂಸ್ಥೆ ಕುರಿತು ಮಾತನಾಡಿದರು.
ಕಿರಿಯ ತರಬೇತಿ ಅಧಿಕಾರಿ ಶೈಲೇಶ್ ಜೆ. ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ಸ್ವಾಗತಿಸಿ, ವಂದಿಸಿದರು.