ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ರಾವ್ ಸುದೀರ್ಘ 40 ವರ್ಷಗಳ ಸೇವೆ ಸಲ್ಲಿಸಿ ಮೇ 31ರಂದು ನಿವೃತ್ತರಾಗಿದ್ದಾರೆ.
ಧರ್ಮಸ್ಥಳದ ಮೋಹನ್ ರಾವ್ ಪಡ್ಡೆಟ್ನಾಯ – ಸುಮತಿ ಪಡ್ಡೆಟ್ನಾಯ ದಂಪತಿಯ ಮೂರನೇ ಪುತ್ರರಾಗಿ ಜನಿಸಿದ ಸುಬ್ರಹ್ಮಣ್ಯ ರಾವ್, ಉಜಿರೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ, ಮಡಿಕೇರಿಯ ಶ್ರೀ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿ ಪೂರೈಸಿದ್ದರು.
ಇವರ ತಂದೆ ಉಜಿರೆಯ ಧ.ಮಂ.ಅ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದು, ಅವರ ಅಕಾಲಿಕ ನಿಧನದ ಬಳಿಕ 1984ರಲ್ಲಿ ಅದೇ ಶಾಲೆಯಲ್ಲಿ ಗೌರವ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಧರ್ಮಸ್ಥಳ ಧ.ಮಂ. ಅ.ಹಿ.ಪ್ರಾ. ಶಾಲೆ ಮತ್ತು ಪುದುವೆಟ್ಟು ಧ.ಮಂ. ಅ.ಹಿ.ಪ್ರಾ. ಶಾಲೆಯಲ್ಲಿ 23 ವರ್ಷಗಳಿಂದ ಸಹಶಿಕ್ಷಕರಾಗಿ, 6 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರು ಯೋಗ ಶಿಕ್ಷಕರಾಗಿ, ತಾಲೂಕು ಯೋಗ ಸಂಘಟಕ, ನೃತ್ಯ ಗುರು, ನಾಟಕ ತರಬೇತುದಾರರಾಗಿಯೂ ಹೆಸರು ಮಾಡಿದ್ದಾರೆ. ಪ್ರತಿಭಾ ಕಾರಂಜಿಯ ಕೋಲಾಟ ಸ್ಪರ್ಧೆಗೆ ಮಕ್ಕಳನ್ನು ಅಣಿಗೊಳಿಸಿ, ತಂಡವನ್ನು 6 ಬಾರಿ ಜಿಲ್ಲಾ ಮಟ್ಟಕ್ಕೆ ಹಾಗೂ 5 ಬಾರಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಗೊಳಿಸುವಲ್ಲಿ ಶ್ರಮಿಸಿದ್ದರು. ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿಯಾಗಿದ್ದು, ಇದೀಗ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.