ಧರ್ಮಸ್ಥಳ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ರಾವ್ ರವರಿಗೆ ಬೀಳ್ಕೊಡುಗೆ ಸಮಾರಂಭವು ಮೇ 31ರಂದು ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯ ಡಾ. ಸತೀಂದ್ರ ರವರು ನಿವೃತ್ತ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ ಇವತ್ತು ಒಂದು ಭಾವನಾತ್ಮಕ ಕ್ಷಣ. ನಾವಿಬ್ಬರೂ ಬಾಲ್ಯದಿಂದಲೇ ಆತ್ಮೀಯರು. ಅವರು ಶಿಕ್ಷಕ ಪರಂಪರೆಯಿಂದ ಬಂದವರು. ಮುಖ್ಯಶಿಕ್ಷಕರಾಗಿ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಈ ಶಾಲೆ 121 ವರ್ಷ ಇತಿಹಾಸ ಇರುವ ಶಾಲೆ. ಖಾವಂದರು ಪ್ರಾರಂಭಿಕ ಶಿಕ್ಷಣವನ್ನು ಪಡೆದ ಶಾಲೆ. ಇದರ ಹೆಸರನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಿಯೋಜಿತ ಮುಖ್ಯ ಶಿಕ್ಷಕರ ಜೊತೆ ಎಲ್ಲರಿಗೂ ಇದೆ. ಆಡಳಿತ ಮಂಡಳಿಯ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಇವರ ನಿವೃತ್ತಿ ಜೀವನವು ಸುಖಕರವಾಗಿರಲಿ, ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಸದಾ ಇವರ ಕುಟುಂಬಕ್ಕೆ ಇರಲಿ ಎಂದು ಆಶೀರ್ವದಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ರಾವ್ ರವರು ನನ್ನ 40 ವರ್ಷಗಳ ಸುದೀರ್ಘ ಸೇವೆಯಲ್ಲಿ 6 ವರ್ಷ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ನನ್ನ ಕರ್ತವ್ಯ ನಿರ್ವಹಣೆಗೆ ಖಾವಂದರರ ಹಾಗೂ ಕುಟುಂಬ ವರ್ಗದವರ ಆಶೀರ್ವಾದ ಹಾಗೂ ನನ್ನ ಸಹೋದ್ಯೋಗಿ ಬಂಧುಗಳ ತುಂಬು ಹೃದಯದ ಸಹಕಾರವಿದೆ. ಇವರಿಗೆ ನಾನು ಸದಾ ಚಿರಋಣಿ ಯಾಗಿದ್ದೇನೆ ಮಾತ್ರವಲ್ಲ ಈ ನನ್ನ ಯಶಸ್ಸನ್ನು ನನ್ನೆಲ್ಲಾ ಸಹೋದ್ಯೋಗಿ ಬಂಧುಗಳಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳುತ್ತಾ ತಾನು ಒಬ್ಬ ನೃತ್ಯ ಗುರುವಾಗಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸತತವಾಗಿ ೬ ಬಾರಿ ಕೋಲಾಟ ಸ್ಪರ್ಧೆ ಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದೆ ಎಂದು ನೆನಪಿಸಿಕೊಂಡರು.
ಶಾಲಾ ಹಿರಿಯ ಶಿಕ್ಷಕ ಕಮಲ್ ತೇಜು ರಜಪೂತ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯು ಸುಬ್ರಹ್ಮಣ್ಯ ರಾವ್ ರವರ ಕಾಲಾವಧಿಯಲ್ಲಿ ಒಳ್ಳೆಯ ಹೆಸರನ್ನು ಪಡೆಯುತ್ತಾ ಬಂದಿದೆ. ಮುಂದೆಯೂ ಹೀಗೆ ಹೆಸರು ಗಳಿಸುವಂತಾಗಲಿ, ಇವರ ಮುಂದಿನ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು.
ಶಿಕ್ಷಕರ ಪರವಾಗಿ ಶ್ರೀಮತಿ ಶ್ರೀಜಾ, ಜೋಸೆಫ್, ಶ್ರೀಮತಿ ಉಷಾ, ಶ್ರೀಮತಿ ಪೂರ್ಣಿಮಾ ಹಾಗೂ ಪೋಷಕರ ಪರವಾಗಿ ಶ್ರೀಮತಿ ಪದ್ಮಪ್ರಿಯಾ, ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಮನೋರಮ, ಗಿರಿಜಾ, ಸತ್ಯವತಿ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪಾರುಪತ್ಯಗಾರರದ ಲಕ್ಷ್ಮೀನಾರಾಯಣ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ, ಸೋಮಶೇಖರ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ಮನೋರಮ, ಗಿರಿಜಾ ಸತ್ಯವತಿ, ಶ್ರೀಧರನ್ ನಾಯರ್, ಬೇಬಿ, ರತ್ನಾವತಿ, ಲೀಲಾ, ಸ್ಥಳೀಯ ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಪದ್ಮರಾಜ್ ಜೈನ್, ಪುದುವೆಟ್ಟು ಶಾಲಾ ಮುಖ್ಯ ಶಿಕ್ಷಕ ಶೀನಪ್ಪ ಗೌಡ, ಉಜಿರೆ ಶಾಲಾ ಮುಖ್ಯಶಿಕ್ಷಕ ಬಾಲಕೃಷ್ಣ, ಕೂಸಪ್ಪ ಗೌಡ ಮುಂತಾದವರು ಭಾಗವಹಿಸಿ ನಿವೃತ್ತರಿಗೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶ್ರೀಮತಿ ಪೂರ್ಣಿಮಾ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಪೂರ್ಣಿಮಾ ಧನ್ಯವಾದವಿತ್ತರು.