ಬೆಳ್ತಂಗಡಿ : ಮಂಗಳೂರು ಸಂಸದರಾಗಿ ಚುನಾಯಿತರಾದ ಕ್ಯಾ.ಬ್ರಿಜೇಶ್ ಚೌಟರವರು ಜೂ.5 ರಂದು ಬೆಳ್ತಂಗಡಿ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಅವರನ್ನು ಬಿಜೆಪಿ ಮಂಡಲದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸದರು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಕಾರ್ಯಕರ್ತರ, ಹಿಂದುತ್ವದ, ಸಂಘಟನೆಯ ಗೆಲುವುದಾಗಿದೆ. ಈ ಗೆಲುವು ನಾರಿಶಕ್ತಿಯ ಗೆಲುವಾಗಿದೆ. ನಾಮಪತ್ರ ಸಲ್ಲಿಕೆಯಿಂದ ಮತ ಎಣಿಕೆ ತನಕ ನಾರಿಶಕ್ತಿ ಪಕ್ಷಕ್ಕೆ, ಪ್ರಧಾನಿ ಮೋದಿಯವರಿಗೆ, ನನ್ನ ಗೆಲುವಿಗೆ ಶಕ್ತಿಯಾಗಿ ನಿಂತಿದೆ. ಪಕ್ಷದ ಗೆಲವುವಿಗೆ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಈ ಬಾರಿಯ ಚುನಾವಣೆ ಸವಾಲಿನದಾಗಿತ್ತು. ಈ ಸವಾಲು ಇಂದು ನಿಂತಿಲ್ಲ ಎಂಬುದಕ್ಕೆ ಕಳೆಂಜದಲ್ಲಿ ನಿನ್ನೆ ನಡೆದ ಘಟನೆ ಸಾಕ್ಷಿಯಾಗಿದೆ. ದ.ಕ ಜಿಲ್ಲೆಯಲ್ಲಿ ಈ ರೀತಿಯ ರಾಜಕಾರಣ ಇದುವರೆಗೆ ನೋಡಿಲ್ಲ, ಇದನ್ನು ನಾವೆಲ್ಲ ಒಟ್ಟಾಗಿ ಎದುರಿಸಬೇಕು. ಕಾಂಗ್ರೆಸ್ ಜಿಹಾದಿ ಮಾನಸಿಕತೆಯವರಿಗೆ, ಬಲಾಢ್ಯರಿಗೆ ಬೆಂಬಲ ನೀಡುತ್ತಿರುವುದೇ ನಿನ್ನೆಯ ಘಟನೆಗೆ ಕಾರಣವಾಗಿದೆ. ಮಲೆಕುಡಿಯ ಸಮಾಜದ ಹುಡುಗ ಬಿಜೆಪಿಗೆ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿ ಆತನ ಆತ್ಮಸ್ಥೆರ್ಯವನ್ನು ಕುಗ್ಗಿಸಲು ಇದನ್ನು ಮಾಡಲಾಗಿದೆ. ಕಾಂಗ್ರೆಸ್ ದ್ವೇಷದ, ಸುಳ್ಳಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸಾವಿರ ಕೇಸು ಹಾಕಿದರೂ ಎದುರಿಸಲು ಸಿದ್ಧ:
ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಭಾಜಪದ ಕಾರ್ಯಕರ್ತರು, ಜನಪ್ರತಿನಿಧಿಗಳ ಶ್ರಮವಹಿಸಿ, 1 ಲಕ್ಷಕ್ಕೂ ಮಿಕ್ಕಿ ಮತದೊಂದಿಗೆ 24 ಸಾವಿರ ಮತಗಳ ಲೀಡ್‌ನ್ನು ತಂದು ಕೊಟ್ಟಿದ್ದೇವೆ. ಸಂಸದರು ನಗರಕ್ಕೆ ಸೀಮಿತವಾದ ಸಿ.ಆರ್.ಫಂಡನ್ನು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಬೇಕು ಎಂದು ತಿಳಿಸಿದರು. ಮಾಜಿ ಶಾಸಕ ದಿ.ವಸಂತ ಬಂಗೇರರು ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ, ಆದರೆ ಈಗ ದ್ವೇಷದ ರಾಜಕಾರಣ ನಡೆಯುತ್ತಿದ್ದು, ಇದಕ್ಕೆ ಪ್ರತ್ಯುತ್ತರವನ್ನು ನೀಡುವ ಕೆಲಸವನ್ನು ನಾವು ಮಾಡುತ್ತೇವೆ. ನೀವು ಬಿಜೆಪಿಯ ಕಾರ್ಯಕರ್ತನ ಮೇಲೆ ಕೇಸು ಹಾಕುವುದು ನಿಮ್ಮ ಷಂಡತನವನ್ನು, ಹೆಡಿತನವನ್ನು ತೋರಿಸುತ್ತದೆ. ನನ್ನ ಮೇಲೆ ಬೇಕಾದಷ್ಟು ಕೇಸ್ ಹಾಕಿ, ಸಾವಿರ ಕೇಸು ತೆಗೆದುಕೊಳ್ಳಲು ನಾನು ರೆಡಿಇದ್ದೇನೆ. ಬಿಜೆಪಿ ಹಿರಿಯ ಕಾರ್ಯಕರ್ತರು ಎದುರಿಸಿದ ಹಿಂದಿನ ಹೋರಾಟವನ್ನು ನೆನೆದರೆ ಇದು ಲೆಕ್ಕಕ್ಕೆ ಅಲ್ಲ ಎಂದು ಹೇಳಿದರು.
ಮತದಾರರಿಗೆ ಅಭಿನಂದನೆ:
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತವನ್ನು ಕೊಟ್ಟು ಶಕ್ತಿ ಕೊಟ್ಟವರು ಬಳ್ತಂಗಡಿಯ ಮತದಾರರು, ಇದಕ್ಕೆ ತಾಲೂಕಿನ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಸಂಸದರು, ಶಾಸಕರನ್ನು ಮಂಡಲದ ವತಿಯಿಂದ ಗೌರವಿಸಲಾಯಿತು.
ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಧನ್ಯವಾದವಿತ್ತರು. ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್, ಯುವ ಮೋಚಾ೯ದ ಜಿಲ್ಲಾ ಕಾಯ೯ದಶಿ೯ ಉಮೇಶ್ ಕುಲಾಲ್, ಎಸ್.ಸಿ ಮೋಚಾ೯ದ ಅಧ್ಯಕ್ಷ ಈಶ್ವರ ಭೈರಾ, ಮಹಿಳಾ ಮೋಚಾ೯ದ ಅಧ್ಯಕ್ಷೆ ಶ್ರೀಮತಿ ವಿದ್ಯಾ, ಪೂರ್ಣಿಮ, ಚಂದ್ರಕಲಾ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಕಾಂತ್, ಯಶವಂತ, ವಿಶ್ವನಾಥ ಹೊಳ್ಳ, ಆಶಾ ಬೆನಡಿಕ್ಟಾ, ನ.ಪಂ ಸದಸ್ಯ ಶರತ್‌ಕುಮಾರ್ ಶೆಟ್ಟಿ, ರಾಜೇಶ್ ಪೆಂರ್ಬುಡ, ಜಗದೀಶ್, ರಾಘವ ಕಲ್ಮಂಜ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.