ಬೆಳ್ತಂಗಡಿ :ರೋಟರಿ ಕ್ಲಬ್ ಬೆಳ್ತಂಗಡಿ ನೇತೃತ್ವದಲ್ಲಿ ವೀರಕೇಸರಿ ಬೆಳ್ತಂಗಡಿ, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಧರ್ಮಸ್ಥಳ, ಎ. ಜೆ. ಬ್ಲಡ್ ಸೆಂಟರ್ ಮತ್ತು ಎ. ಜೆ. ಹಾಸ್ಪಿಟಲ್ ಹಾಗೂ ರಿಸರ್ಚ್ ಸೆಂಟರ್, ಮಂಗಳೂರು ಇವುಗಳ ಸಹಭಾಗಿತ್ವದಲ್ಲಿ ಮತ್ತು ಸೇವಾಭಾರತಿ, ಕನ್ಯಾಡಿ ಇದರ ಸಂಯೋಜನೆಯಲ್ಲಿ ಬೃಹತ್ ರಕ್ತದಾನ ಶಿಬಿರವು ಧರ್ಮಸ್ಥಳದ ಅಟಲ್ ಜೀ ಸಭಾಭವನದಲ್ಲಿ ಜರುಗಿತು.
ರೋಟರಿ ಕ್ಲಬ್ ಬೆಳ್ತಂಗಡಿಯ ನಿಯೋಜಿತ ಅಧ್ಯಕ್ಷ ಪೂರಣ್ ವರ್ಮ ಉದ್ಘಾಟಿಸಿ, “ರಕ್ತದ ತುರ್ತು ಅವಶ್ಯಕತೆಗೆ ಹೆಚ್ಚು ಸ್ಪಂದಿಸಲು ರಕ್ತದಾನ ಶಿಬಿರಗಳ ಆಯೋಜನೆ ಮಹತ್ತರವಾದುದು. ನಾವುಗಳು ರಕ್ತದಾನ ಮಾಡುವುದನ್ನು ಮುಂದೂಡಬಹುದು ಆದರೆ ತುರ್ತು ರಕ್ತ ಅವಶ್ಯಕತೆ ಇರುವ ರೋಗಿಗಳ ಚಿಕಿತ್ಸೆಗೆ ರಕ್ತ ಪೂರೈಕೆ ಮಾಡುವುದನ್ನು ಮುಂದೂಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಬದುಕಿಗೆ ಬೆಳಕು ಚೆಲ್ಲಿದಂತಾಗುತ್ತದೆ” ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಧರ್ಮಸ್ಥಳದ ಅಧ್ಯಕ್ಷ ಪ್ರೀತಂ ಡಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಅನ್ನಪೂರ್ಣದ ಮ್ಯಾನೇಜರ್ ಸುಬ್ರಮಣ್ಯ ಪ್ರಸಾದ್,ಮಂಗಳೂರಿನ ಎ. ಜೆ. ಬ್ಲಡ್ ಸೆಂಟರ್ ನ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ರಕ್ತನಿಧಿ ವಿಭಾಗದ ಮುಖ್ಯಸ್ಥ ಡಾ.ಅರವಿಂದ್ ಪಿ.ಮಾನಾಡಿದರು.ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಇದುವರೆಗೆ 51 ಬಾರಿ ರಕ್ತದಾನ ಮಾಡಿದ ಉಜಿರೆಯ ಪ್ರಗತಿಪರ ಕೃಷಿಕ ಈಶ್ವರ್ ಭಟ್ ಅತ್ತಾಜೆ ಹಾಗೂ 52 ಬಾರಿ ರಕ್ತದಾನ ಮಾಡಿದ ಪುರುಷೋತ್ತಮ್ ಗೌಡ ಕೊಕ್ಕಡ, ಬೆಳ್ತಂಗಡಿ ತಾಲೂಕಿನಾದ್ಯಂತ 75ಕ್ಕೂ ಹೆಚ್ಚು ರಕ್ತದಾನ ಶಿಬಿರಕ್ಕೆ ಸಂಘ-ಸಂಸ್ಥೆಗಳನ್ನು ಸಂಘಟಿಸಿ, ಶಿಬಿರಗಳನ್ನು ಆಯೋಜಿಸಿದ ಹಾಗೂ ತುರ್ತು ರಕ್ತದ ವ್ಯವಸ್ಥೆಯನ್ನು ಮಾಡುತ್ತಿರುವ ಶ್ರೀಧರ್ ಕೆ.ವಿ. ಉಜಿರೆ, ತಾಲೂಕಿನಲ್ಲಿ ಅತಿ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿರುವ ವೀರ ಕೇಸರಿ ಬೆಳ್ತಂಗಡಿ ಹಾಗೂ ಶಿವಾಜಿ ಬಾಯ್ಸ್ ಆಫ್ ಗ್ರೂಪ್, ಕೊಕ್ಕಡ ಇವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಸೇವಾಭಾರತಿಯ ಆರೋಗ್ಯಮ್ ಪ್ರಮುಖರಾದ ಶ್ರೀಧರ್ ಉಜಿರೆ, ವೀರಕೇಸರಿ ಬೆಳ್ತಂಗಡಿಯ ಸದಸ್ಯರಾದ ಸುಧಾಕರ್ ಧರ್ಮಸ್ಥಳ, ಸೇವಾಭಾರತಿಯ ಸಲಹಾ ಮಂಡಳಿ ಸದಸ್ಯರಾದ ರಜತ್ ರಾವ್ ಉಪಸಿತರಿದ್ದರು.
ಸೇವಾಭಾರತಿಯ ನಿಯೋಜಿತ ಡಾಕ್ಯುಮೆಂಟೇಶನ್, ಮಾನಿಟರಿಂಗ್ ಮತ್ತು ಇವಲ್ಯೂಟಿಂಗ್ ಕೋ-ಆರ್ಡಿನೇಟರ್ ಸುಮಾ ಕಾರ್ಯಕ್ರಮ ನಿರೂಪಿಸಿ, ಸಲಹಾ ಮಂಡಳಿಯ ಸದಸ್ಯರಾದ ರಜತ್ ರಾವ್ ಧನ್ಯವಾದವಿತ್ತರು. ಈ ಶಿಬಿರದಲ್ಲಿ ಒಟ್ಟು 177 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.