ಬೆಂಗಳೂರು: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲಾಗಿದ್ದು ನಾಳೆಯಿಂದಲೇ ಜಾರಿಗೆ ಬರಲಿದೆ. ಬೆಲೆ ಏರಿಕೆ ಬಗ್ಗೆ ರಾಜ್ಯ ಸರಕಾರದ ವಿರುದ್ಧ ವಿರೋಧ ಪಕ್ಷ ಚಾಟಿ ಬೀಸಲಾರಂಭಿಸಿದ್ದು ಈ ಮಧ್ಯೆ ಕೆಎಂಎಫ್ ಅಧ್ಯಕ್ಷರು ಬೆಲೆ ಏರಿಕೆಗೆ ಕಾರಣ, ಸ್ಪಷ್ಟನೆ ನೀಡಿದ್ದಾರೆ.
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಪ್ರಸ್ತುತ ಲೀಟರ್ ಹಾಲಿಗೆ 42 ರೂ. ಇದ್ದು, ಇದಕ್ಕೆ 2 ರೂ. ಹೆಚ್ಚಳ ಮಾಡಲಾಗುವುದು. ಈ ಪರಿಷ್ಕೃತ ದರಗಳು ಹಾಲಿಗೆ ಮಾತ್ರ ಅನ್ವಯವಾಗಲಿದೆ. ಆದರೆ ಗ್ರಾಹಕರಿಗೆ ಹೆಚ್ಚುವರಿಯಾಗಿ ಪ್ರತಿ ಅರ್ಧ ಲೀಟರ್ (500 ಎಂಎಲ್) ಮತ್ತು ಒಂದು ಲೀಟರ್ (1000 ಎಂಎಲ್) ಪ್ಯಾಕೆಟ್‌ಗಳಿಗೆ ಮಾತ್ರ 50 ಮಿಲಿ ಲೀಟರ್ ಹಾಲನ್ನು ಹೆಚ್ಚುವರಿ ನೀಡುವುದರೊಂದಿಗೆ ಪ್ರತಿ ಪ್ಯಾಕೆಟ್‌ಗಳ ದರವನ್ನು 2 ರೂಪಾಯಿಯಂತೆ ಹೆಚ್ಚಳ ಮಾಡಲಾಗುತ್ತಿದೆ ಎಂದಿದ್ದಾರೆ.
ನಂದಿನಿ ಉತ್ಪನ್ನಗಳಾದ ಮೊಸರು, ಲಸ್ಸಿ, ಇತರ ಉತ್ಪನ್ನಗಳಲ್ಲಿ ಏರಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.