ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಸಮಾಜಘಾತುಕ ಶಕ್ತಿಗಳಿಂದ ಸುಳ್ಳು ಸುದ್ದಿ ಹಾಗೂ ಅಪಪ್ರಚಾರಕ್ಕೆಜಿಲ್ಲಾ ಜನಜಾಗೃತಿ ವೇದಿಕೆ ಖಂಡನೆ

Suddi Udaya

  • ದೇಶದಲ್ಲೇ ಅತಿ ದೊಡ್ಡ ಸ್ವ-ಸಹಾಯ ಸಂಘಗಳ ಆರ್ಥಿಕ ಸೇರ್ಪಡೆಯನ್ನು ನಿರ್ವಹಿಸುವ
    ಸಂಸ್ಥೆ ಗ್ರಾಮಾಭಿವೃದ್ಧಿ ಯೋಜನೆ
  • ಯೋಜನೆ ‘ಚಾರಿಟೇಬಲ್ ಟ್ರಸ್ಟ್’ ಅಡಿಯಲ್ಲಿ
    ಕಾರ್ಯನಿರ್ವಹಿಸುತ್ತಿದ್ದು, ಲಾಭಗಳಿಕೆಯ ಉದ್ದೇಶಿತ ಸಂಸ್ಥೆ ಅಲ್ಲ
  • ತನ್ನ ಆದಾಯದಲ್ಲಿ ಮಿಗತೆ ಬಂದರೆ ಅದನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳ
    ಮೂಲಕ ಸಮಾಜಕ್ಕೆ ಅರ್ಪಿಸುವ ಒಂದು ಚಾರಿಟೇಬಲ್ ಟ್ರಸ್ಟ್
  • ಸಮಾಜಘಾತುಕ ಶಕ್ತಿಗಳಿಂದ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಸುಳ್ಳು ಸುದ್ದಿ ಹಾಗೂ ಅಪಪ್ರಚಾರಕ್ಕೆ
    ಜಿಲ್ಲಾ ಜನಜಾಗೃತಿ ವೇದಿಕೆ ಖಂಡನೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರ್.ಬಿ.ಐ.ನ ನಿಯಮದಂತೆ ದೇಶದ ಪ್ರಮುಖ ರಾಷ್ಟ್ರೀಕೃತ ಹಾಗೂ ಅನುಸೂಚಿತ ಬ್ಯಾಂಕ್‌ಗಳಿಗೆ ಸಾಂಸ್ಥಿಕ ಬಿ.ಸಿ.ಯಾಗಿ ಸೇವೆ ಸಲ್ಲಿಸುತ್ತಿದೆ. ದೇಶದಲ್ಲೇ ಅತಿ ದೊಡ್ಡ ಸ್ವ-ಸಹಾಯ ಸಂಘಗಳ ಆರ್ಥಿಕ ಸೇರ್ಪಡೆಯನ್ನು ನಿರ್ವಹಿಸುವ ಸಂಸ್ಥೆಯಾಗಿ ಗ್ರಾಮಾಭಿವೃದ್ಧಿ ಯೋಜನೆಯು ಗುರುತಿಸಿಕೊಂಡಿದೆ. ಕೆಲವು ತಿಂಗಳುಗಳಿಂದ ‘ಗ್ರಾಮಾಭಿವೃದ್ಧಿ ಯೋಜನೆಯ ಸಾಲವನ್ನು ಯಾರೂ ಕಟ್ಟಬೇಡಿ’, ’ಲೈಸೆನ್ಸ್ ಇಲ್ಲದೆ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ’ ಇತ್ಯಾದಿ ಸುಳ್ಳು ಸುದ್ದಿಗಳನ್ನು ಗ್ರಾಮೀಣ ಮುಗ್ಧ ಜನತೆಗೆ ಕೆಲವು ಸಮಾಜಘಾತುಕ ಶಕ್ತಿಗಳು ಮಾಡುತ್ತಿದ್ದು, ಇದನ್ನು ಖಂಡಿಸುವುದಾಗಿ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಜಿಲ್ಲಾ ಸ್ಥಾಪಕಾಧ್ಯಕ್ಷ ಸಾಜಾ ರಾಧಕೃಷ್ಣ ಆಳ್ವ, ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ರಾಜ್ಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಯ್ಸ್ ಹಾಗೂ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.


ಅವರು ಜೂ.26ರಂದು ಬೆಳ್ತಂಗಡಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವಸಹಾಯ ಸಂಘಗಳಿಗೆ ಬ್ಯಾಂಕುಗಳಿಂದ ನೇರವಾಗಿ ಸಾಲ ಸೌಲಭ್ಯವನ್ನು ನೀಡುತ್ತಿರುವುದರಿಂದ ಶೇ. 13.5 ಬಡ್ಡಿದರದಲ್ಲಿ ಒಂದು ಸಂಘಕ್ಕೆ ಗರಿಷ್ಠ ರೂ. 25ಲಕ್ಷದವರೆಗೆ ಸಾಲ ದೊರೆಯುತ್ತಿರುವುದು ದೇಶದಲ್ಲೇ ಒಂದು ಮಾದರಿ ಬಿ.ಸಿ. ವ್ಯವಸ್ಥೆಯಾಗಿದೆ. ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಉಭಯ ಜಿಲ್ಲೆಗಳಲ್ಲಿ 46,972 ಸ್ವ-ಸಹಾಯ ಸಂಘಗಳಿದ್ದು ರೂ. 2761 ಕೋಟಿ ಮೊತ್ತದ ಹೊರಬಾಕಿ ಇರುತ್ತದೆ. ಕಿರು ಆರ್ಥಿಕ ಸಾಲ ಸೌಲಭ್ಯವನ್ನು ಒದಗಿಸುವ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಎಲ್ಲಾ ಸಂಸ್ಥೆಗಳು ಲಾಭದಾಯಕ ಉದ್ದೇಶಿತ ಸಂಸ್ಥೆಗಳಾಗಿದ್ದರೆ, ’ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಮಾತ್ರ ’ಚಾರಿಟೇಬಲ್ ಟ್ರಸ್ಟ್’ ಅಡಿಯಲ್ಲಿ ನೊಂದಾಯಿತವಾದ ಸಂಸ್ಥೆಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯು ’ಚಾರಿಟೇಬಲ್ ಟ್ರಸ್ಟ್’ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಇದು ಲಾಭ ಗಳಿಕೆಯ ಉದ್ದೇಶಿತ ಸಂಸ್ಥೆ ಅಲ್ಲ, ಬದಲಾಗಿ ತನ್ನ ಆದಾಯದಲ್ಲಿ ಮಿಗತೆ ಬಂದರೆ ಅದನ್ನು ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಅರ್ಪಿಸುವ ಒಂದು ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯಾಗಿದೆ. ಜಿಲ್ಲೆಯ ಸ್ವಸಹಾಯ ಸಂಘಗಳಿಗೆ ’ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಮತ್ತು ’ಬ್ಯಾಂಕ್ ಆಫ್ ಬರೋಡಾ’ದಿಂದ ಯೋಜನೆಯ ಮೂಲಕ ಬಿ.ಸಿ. ಮಾದರಿಯಲ್ಲಿ ಸಾಲ ದೊರೆಯುತ್ತಿದ್ದು ಇಂತಹ ಸಾಲಗಳನ್ನು ಕಟ್ಟಬೇಡಿ ಎಂದು ಪ್ರಚೋದನೆ ನೀಡುವುದು ದೇಶದ್ರೋಹದ ಮತ್ತು ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುವ ಕೃತ್ಯವಾಗಿದೆ ಇದನ್ನು ಖಂಡಿಸುವುದಾಗಿ ತಿಳಿಸಿದರು.
ಕೆಲವು ತಿಂಗಳುಗಳಿಂದ ‘ಗ್ರಾಮಾಭಿವೃದ್ಧಿ ಯೋಜನೆಯ ಸಾಲವನ್ನು ಯಾರೂ ಕಟ್ಟಬೇಡಿ ಲೈಸೆನ್ಸ್ ಇಲ್ಲದೆ

ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ’ ಇತ್ಯಾದಿ ಸುಳ್ಳು ಸುದ್ದಿಗಳನ್ನು ಗ್ರಾಮೀಣ ಮುಗ್ಧ ಜನತೆಗೆ ಕೆಲವು ಸಮಾಜಘಾತುಕ ಶಕ್ತಿಗಳು ಮಾಡುತ್ತಿದ್ದಾರೆ. ಬಡಜನತೆಗೆ ಅತ್ಯಂತ ಅನುಕೂಲಗಳನ್ನು ಒದಗಿಸುತ್ತಿರುವ ಗ್ರಾಮಾಭಿವೃದ್ಧಿ ವ್ಯವಸ್ಥೆಯನ್ನು ಹಾಳುಮಾಡುವ ಸಮಾಜದ್ರೋಹಿ ಪ್ರಯತ್ನಗಳನ್ನು ಗಮನಿಸಿದ ಕರಾವಳಿ ಪ್ರದೇಶದ ಸಜ್ಜನರು ತೀವ್ರ ನೊಂದಿದ್ದಾರೆ. ಸಮಾಜಘಾತುಕ ಶಕ್ತಿಗಳ ಅಪಪ್ರಚಾರದ ಬಗ್ಗೆ ಸಂಘದ ಸದಸ್ಯರು, ಸಾರ್ವಜನಿಕರು ಈಗಾಗಾಲೇ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರನ್ನು ದಾಖಲಿಸಿದ್ದಾರೆ. ಅಪಪ್ರಚಾರ ಮಾಡುತ್ತಿದ್ದ ಒಂದು ವ್ಯವಸ್ಥಿತ ಗುಂಪನ್ನು ಪಡುಬಿದ್ರೆಯ ಎಲ್ಲೂರಿನ ಜನತೆ ಪೊಲೀಸರಿಗೆ ಒಪ್ಪಿಸಿದ್ದು ಇತ್ತೀಚೆಗೆ ವರದಿಯಾಗಿದೆ ಎಂದು ತಿಳಿಸಿದರು.
ಈ ಅಪಪ್ರಚಾರವನ್ನು ಅಷ್ಟಕ್ಕೇ ನಿಲ್ಲಿಸದೇ ಪೊಲೀಸ್ ಇಲಾಖೆಗಳ ಹೆಸರನ್ನು ಬಳಕೆ ಮಾಡಿ ಇಲಾಖೆಗೂ ಕೆಟ್ಟ ಹೆಸರು ತರುವ ಪ್ರಯತ್ನ ಕೆಲವು ದಿನಗಳ ಹಿಂದೆ ಪ್ರಾರಂಭಿಸಿದ್ದಾರೆ. ಉಡುಪಿ ಜಿಲ್ಲೆಯ ಎಸ್.ಪಿ ರವರೇ ಯೋಜನೆಯ ಸಾಲ ಕಟ್ಟಬೇಡಿ. ಬಡ್ಡಿ ಕಟ್ಟ ಬೇಡಿ ಎಂದು ಹೇಳಿದ್ದಾರೆಂದು ಸುಳ್ಳು ಪ್ರಚಾರವನ್ನು ಸಮೂಹ ಮಾದ್ಯಮಗಳ ಮೂಲಕ ಕೆಲವು ಕಿಡಿಕೇಡಿಗಳು ಮಾಡುತ್ತಿದ್ದಾರೆ. ಒಕ್ಕೂಟಗಳ ಪದಾಧಿಕಾರಿಗಳು.

ಯೋಜನೆಯ ಅಧಿಕಾರಿಗಳು ಇದನ್ನು ಎಸ್.ಪಿಯವರ ಗಮನಕ್ಕೆ ತಂದು ಇಂತಹ ಕಿಡಿಕೇಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ದೂರನ್ನು ನೀಡಿದ್ದಾರೆ ಎಂದು ವಿವರಿಸಿದರು. ದೂರನ್ನು ಸ್ವೀಕರಿಸಿದ ಎಸ್.ಪಿ ರವರು ಯೋಜನೆಯ ಸಾಲವನ್ನು ಕಟ್ಟಬೇಡಿ, ಬಡ್ಡಿಯನ್ನು ಕಟ್ಟಬೇಡಿ ಎಂದು ನಾವು ಹೇಳಿಲ್ಲ. ಈ ಬಗ್ಗೆ ದೂರನ್ನು ಪರಿಶೀಲಿಸಿ. ಮುಂದಿನ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಂಘದ ಸದಸ್ಯರಿಗೆ.ಒಕ್ಕೂಟದ ಪದಾಧಿಕಾರಿಗಳಿಗೆ, ಎಸ್.ಬಿ.ಐ ಬ್ಯಾಂಕ್ ಅಧಿಕಾರಿಗಳಿಗೆ, ಯೋಜನೆಯ ಅಧಿಕಾರಿಗಳಿಗೆ ಭರವಸೆಯನ್ನು ನೀಡಿದ್ದಾರೆ.ಮೊನ್ನೆ ನಾರವಿಯಲ್ಲಿ ಕೆಲವು ವ್ಯಕ್ತಿಗಳ ನಡುವೆ ವೈಯಕ್ತಿಕ ವಿಚಾರದಲ್ಲಿ ನಡೆದ ಘಟನೆಯನ್ನು ಯೋಜನೆಯ ಮೇಲೆ ಅಪಪ್ರಚಾರ ಮಾಡಲು ಬಳಸಿಕೊಳ್ಳುವಂತಹ ಹೀನ ಕೃತ್ಯಕ್ಕೆ ಈ ಸಮಾಜ ಘಾತುಕ ಶಕ್ತಿಗಳು ಕೈ ಹಾಕಿರುವವುದನ್ನು ಕೂಡಾ ವೇದಿಕೆ ತೀವ್ರವಾಗಿ
ಖಂಡಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆಯ ಬಂಟ್ವಾಳದ ಅಧ್ಯಕ್ಷ ರೋನಾಲ್ಡ್ ಡಿಸೋಜಾ, ಶಾರದಾ ಆರ್ ರೈ ಅಧ್ಯಕ್ಷರು ಗುರುವಾಯನಕೆರೆ
ಮಾಜಿ ಅಧ್ಯಕ್ಷರುಗಳಾದ ಪಿ.ಕೆ ರಾಜು ಪೂಜಾರಿ, ಕಿಶೋರ್ ಹೆಗ್ಡೆ, ತಿಮ್ಮಪ್ಪ ಗೌಡ, ವೆಂಕಟರಾಯ ಅಡೂರು, ಡಿ.ಎ ರಹಿಮಾನ್ ತಾಲೂಕು ಅಧ್ಯಕ್ಷ ಖಾಸೀಂ ಮಲ್ಲಿಗೆಮನೆ ಪ್ರಮುಖರಾದ ಲೋಕನಾಥ್ ಅಟ್ಟೂರು ಸುಳ್ಯ, ವಿಶ್ವನಾಥ ರೈ ಕಳೆಂಜ ಸುಳ್ಯ, ವಿಮಲಾ ರಂಗಯ್ಯ ಸುಳ್ಯ, ಮಹಾಬಲ ರೈ ಪುತ್ತೂರು, ನಿಕಟಪೂರ್ವ ಅಧ್ಯಕ್ಷ ರಾಜ್ಯ ಸಲಹಾ ಸಮಿತಿ ರಾಧಕೃಷ್ಣ ಆಳ್ವ ಪುತ್ತೂರು, ಮಹೇಶ್ ಕೆ ಸವಣೂರು ಕಡಬ, ಗೋಪಾಲ ಕೃಷ್ಣ ಅರಿಬೈಲು ಮಂಜೇಶ್ವರ, ಡಾ. ಜಯಪ್ರಕಾಶ್ ಮಿಯಪದವು, ಸುಭಾಷ್ಟಂದ್ರ ಚೌಟ
ಮೂಡಬಿದ್ರೆ, ಅಖಿಲೇಶ್ ನಗುಮುಗಂ ಕಾಸರಗೋಡು,ಮಾಧವ ಗೌಡ ಅಡಳಿತ ಯೋಜನಾಧಿಕಾರಿ, ಗಣೇಶ್ ಆಚಾರ್ಯ ಯೋಜನಾಧಿಕಾರಿ, ತಾಲೂಕು ಕಾರ್ಯದರ್ಶಿಗಳಾದ ಕರುಣಾಕರ ಆಚಾರ್ಯ, ಸುರೇಂದ್ರ, ದಯಾನಂದ ಪೂಜಾರಿ, ಬಾಲಕೃಷ್ಣ ಎಮ್, ಶ್ರೀಮತಿ ಸುನೀತಾ, ಮೇದಪ್ಪ ಎನ್, ಶಶಿಧರ್ ಎಮ್, ರಮೇಶ್, ಮಾಧವ, ಮೇಲ್ವಿಚಾರಕ ನಿತೇಶ್, ಮಹೇಶ್ ಸವಣೂರು ಅಧ್ಯಕ್ಷರು ಜನಜಾಗೃತಿ ವೇದಿಕೆ ಕಡಬ ಉಪಸ್ಥಿತರಿದ್ದರು.

Leave a Comment

error: Content is protected !!