ಧರ್ಮಸ್ಥಳ : ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಜೂನ್ 26ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ “ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ಪರಿಣಾಮದ ಕುರಿತು ಜಾಗೃತಿ ಅಭಿಯಾನ” ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಸಂತ ಆಚಾರ್ ಮಾತನಾಡುತ್ತಾ, “ಮಾದಕ ಪದಾರ್ಥಗಳ ಸೇವನೆಯಿಂದ ಮನುಷ್ಯನ ಸ್ವಾಸ್ಥ್ಯ ಕೆಡುವುದಲ್ಲದೆ ಸಾಮಾಜಿಕ ಸ್ವಾಸ್ಥ್ಯವೂ ಕೂಡ ನಾಶವಾಗುವುದು. ವಿದ್ಯಾರ್ಥಿಗಳು ಬಾಲ್ಯದಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿಕೊಳ್ಳುವ ಮೂಲಕ ಯಾವುದೇ ಸಮಸ್ಯೆಗೆ ಎದೆಗುಂದದೆ, ಧನಾತ್ಮಕವಾಗಿ ಚಿಂತಿಸಿ ಗುರು ಹಿರಿಯರಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕು” ಎಂದರು.
ಧರ್ಮಸ್ಥಳ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಧರ್ಮಸ್ಥಳ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧರ್ಮಸ್ಥಳ ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರಶಾಂತ್ ಮತ್ತು ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಪದ್ಮರಾಜ್ ಅಧ್ಯಕ್ಷತೆಯನ್ನು ವಹಿಸಿ, ಸ್ವಾಗತಿಸಿದರು. ಭವ್ಯ ಹೆಗಡೆ ವಂದಿಸಿ, ಶಿಕ್ಷಕ ಯುವರಾಜ ಕಾರ್ಯಕ್ರಮವನ್ನು ನಿರೂಪಿಸಿದರು.