“ಸ್ಪೆಕ್ಟ್ರಾ” ಅಸೋಸಿಯೇಶನ್‌ ನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ಉಜಿರೆ: ಇಲ್ಲಿನ ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ “ಸ್ಪೆಕ್ಟ್ರಾ” ಅಸೋಸಿಯೇಶನ್‌ ನ ವಾರ್ಷಿಕ ಕಾರ್ಯ ಚಟುವಟಿಕೆಗಳ ಉದ್ಘಾಟನೆಯನ್ನು ನೇರವೇರಿಸಲಾಯಿತು.


ಉದ್ಘಾಟಕರಾಗಿ ಎಸ್.ಡಿ.ಎಮ್. ಸ್ನಾತಕೋತ್ತರ ಕಾಲೇಜಿನ ಭೌತ ವಿಭಾಗ ಮುಖ್ಯಸ್ಥ ಡಾ.ರಾಘವೇಂದ್ರ ಎಸ್‌ ಇವರು ಆಗಮಿಸಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡುತ್ತಾ “ಭೌತಶಾಸ್ತ್ರ ಎಂಬುದು ವಿಜ್ಞಾನದ ಎಲ್ಲಾ ವಿವಿಧ ಶಾಖೆಗಳ ತಾಯಿ”. ಅನ್ವಯಿಕ, ತಾಂತ್ರಿಕ ಹೀಗೆ ಯಾವುದೇ ಶಾಖೆ ಇದ್ದರೂ ಅದಕ್ಕೆ ಮೂಲ ತಳಹದಿ ಭೌತಶಾಸ್ತ್ರವೇ ಆಗಿದೆ.ಭೌತಶಾಸ್ತ್ರವು ಗಣಿತಶಾಸ್ತ್ರ ಎಂಬ ಭಾಷೆಯಲ್ಲಿ ಬರೆದ ನಿಸರ್ಗದ ಕವಿತೆಯಾಗಿದೆ ಎಂದು ತುಂಬಾ ಸುಂದರವಾಗಿ ಭೌತಶಾಸ್ತ್ರದ ಘನತೆಯನ್ನು ವಿವರಿಸಿದರು. ಭೌತಶಾಸ್ತ್ರವನ್ನು ಅಧ್ಯಯಿಸುವವನು ಭೌತಶಾಸ್ತ್ರಜ್ಞನಲ್ಲ, ಭೌತಶಾಸ್ತ್ರಜ್ಞ ಎಂದರೆ, ತಮ್ಮ ಸುತ್ತಮುತ್ತಲಿರುವುದನ್ನು, ನಡೆಯುವ ವಿದ್ಯಮಾನವನ್ನು ಎಲ್ಲರಂತೆಯೇ ತಾನೂ ನೋಡಿ ,ಆದರೆ ಯಾರಿಗೂ ತಿಳಿಯದ್ದನ್ನು, ಅರ್ಥವಾಗದ್ದನ್ನು ತಾನು ತಿಳಿದು ಅರ್ಥೈಸಿ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಮಾಡುತ್ತಾನೋ ಅವನು ನಿಜವಾದ ಭೌತಶಾಸ್ತ್ರಜ್ಞ, ನಮ್ಮ ಸುತ್ತ-ಮುತ್ತ ಇರುವ ಎಲ್ಲಾ ವಸ್ತುವಿನಲ್ಲೂ ಭೌತ ವಿಜ್ಞಾನದ ಅಂಶ ಅಡಕವಾಗಿದೆ ಆದರೆ ಅದನ್ನು ಸೂಕ್ಷ್ಮವಾಗಿ ನೋಡಿ ಅರ್ಥೈಸಿಕೊಳ್ಳುವ ಯುಕ್ತಿ ಬೇಕಾಗುತ್ತದೆ ಅದಕ್ಕಾಗಿ ಮೂಲ ವಿಜ್ಞಾನದ ಅಧ್ಯಯನ ಅಗತ್ಯ.ಮೂಲ ವಿಜ್ಞಾನದತ್ತ ವಿದ್ಯಾರ್ಥಿಗಳು ಆಸಕ್ತರಾಗಲು ಶಿಕ್ಷಕರು ವಿದ್ಯಾರ್ಥಿಗಳನ್ನು ಪಠ್ಯದ ಹೊರತು ಪಡಿಸಿ “ಸ್ಪೆಕ್ಟ್ರ”ದಂತಹ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರೇರೇಪಿಸಬೇಕು ಎಂದು ನುಡಿದು ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಿಭಾಗ ಮುಖ್ಯಸ್ಥ ತಿರುಮಲ ಪ್ರಸಾದ್‌ ಸಿ ಹೆಚ್‌ ತಮ್ಮ ಪ್ರಾಸ್ಥಾವಿಕ ನುಡಿಯಲ್ಲಿ “ಸ್ಪೆಕ್ಟ್ರಾ” ಅಸೋಸಿಯೇಶನ್‌ ನ ಉದ್ದೇಶ, ಅದರ ವಿವಿಧ ಕಾರ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಹೇಗೆ ತಮ್ಮ ಕಲಿಕಾ ಕೌಶಲ ವರ್ಧನೆಗೆ ಉಪಯುಕ್ತವಾಗುತ್ತವೆ ಮತ್ತು ವಿದ್ಯಾರ್ಥಿಗಳು ಹೇಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಅಸೋಸಿಯೇಶನ್‌ ನ ಕಾರ್ಯಚಟುವಟಿಕೆಗಳನ್ನು ಯಶಸ್ವಿಗೊಳಿಸಬಹುದು ಎಂದು ಸಂಕ್ಷಿಪ್ತವಾಗಿ ವಿವರಿಸಿದರು.


ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯಾರಾದ ಪ್ರಮೋದ್‌ ಕುಮಾರ್‌ ಬಿ ತಮ್ಮ ಅಧ್ಯಕ್ಷೀಯ ನುಡಿಯನ್ನು ಮಾತನಾಡುತ್ತ, ವಿದ್ಯಾರ್ಥಿಗಳು ಕಲಿಕೆಯಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳಬೇಕಾದರೆ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ, ವೇದಿಕೆ ಬೇಕಾಗುತ್ತದೆ. ಅಂತಹ ಅವಕಾಶ, ವೇದಿಕೆ ಸಿಕ್ಕಾಗ ಇನ್ನೂ ಆಸಕ್ತಿಯಿಂದ ಆಯಾ ವಿಷಯಗಳನ್ನು ಕಲಿಯಲು ಸಾಧ್ಯ.ಈ ಉದ್ಧೇಶಕ್ಕಾಗಿಯೇ ನಮ್ಮ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತೀ ವಿಷಯದಲ್ಲಿಯೂ ಸಂಘ ಅಥವಾ ಅಸೋಸಿಯೇಶನ್‌ನನ್ನು ನಡೆಸಲಾಗುತ್ತಿದೆ, ಈ ಮೂಲಕ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ವಿಷಯಾಧಾರಿತ ಕೌಶಲವನ್ನು ಅನಾವರಣಗೊಳಿಸಲು ಸಾಧ್ಯ.ಇಂದಿನ ಕಾಲವು ಅವಕಾಶಗಳ ಆಗರ ಎಲ್ಲಾ ವಿಭಾಗಗಳಲ್ಲಿಯೂ ಸಾವಿರಾರು ಅವಕಾಶಗಳಿದ್ದು ಅದರಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸರಿಯಾಗಿ ತೊಡಗಿಸಿಕೊಂಡು ಅವಕಾಶಗಳ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
“ಸ್ಪೆಕ್ಟ್ರಾ” ಅಸೋಸಿಯೇಶನ್‌ ನ ಸಂಯೋಜಕ ಉಪನ್ಯಾಸಕಿಯರಾದ ಶ್ರೀಮತಿ ಸಂಧ್ಯಾ ಪಿ ವಿ, ಶ್ರೀಮತಿ ಪ್ರಶಾಂತಿ ಎ ಮತ್ತು ಶ್ರೀಮತಿ ದಿವ್ಯಶ್ರೀ ಇವರ ಮಾರ್ಗದರ್ಶನದಲ್ಲಿ “ಸ್ಪೆಕ್ಟ್ರಾ” ಅಸೋಸಿಯೇಶನ್‌ನ ಸದಸ್ಯರು ನಿಸರ್ಗದ ಮೂಲತತ್ವವಾದ “ಪಂಚಮಹಾ ಭೂತ” ವನ್ನು ಪ್ರತಿನಿಧಿಸುವ ಹಾಡಿಗೆ ನರ್ತಿಸಿ ಅಸೋಸಿಯೇಶನ್‌ನನ್ನು ವಿನೂತನವಾಗಿ ಉದ್ಘಾಟಿಸಿದರು. ಹಾಗೆಯೇ ಏಳು ಬಣ್ಣದ ಬೆಳಕಿನ ಸಂಯೋಜನೆಯ ಮೂಲಕವಾಗಿಯೂ ಅತಿಥಿಗಳು “ಸ್ಪೆಕ್ಟ್ರಾ”ವನ್ನು ಅನಾವರಣಗೊಳಿಸಿದರು.


ಇದೇ ಸಂದರ್ಭದಲ್ಲಿ ಅಸೋಸಿಯೇಶನ್‌ ನ ನೂತನ ಪದಾದಿಕಾರಿಗಳಿಗೆ ಹಾಗೂ ವಿಶೇಷವಾಗಿ ಈ ವರ್ಷ ಅಸೋಸಿಯೇಶನ್‌ ಗೆ ಸೆರ್ಪಡೆಯಾದ ವಾಣಿಜ್ಯ ವಿಭಾಗದ ಆರು ಸದಸ್ಯರಿಗೆ ಹೂ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ “ಸ್ಪೆಕ್ಟ್ರಾ” ಅಸೋಸಿಯೇಶನ್‌ ನ ಸರ್ವ ಸದಸ್ಯರೂ,ಭೌತ ವಿಭಾಗದ ಎಲ್ಲಾ ಉಪನ್ಯಾಸಕರೂ ಹಾಗೂ ಕಾಲೇಜಿನ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಾದ ಪ್ರಖ್ಯಾತ್‌ ಸ್ವಾಗತಿಸಿ, ಓಜಸ್‌ ವಂದಿಸಿದರೆ ವಿದ್ಯಾರ್ಥಿನಿ ಶ್ರದ್ಧಾ ಕಾರ್ಯಕ್ರಮ ನಿರ್ವಹಿಸಿದರು.

Leave a Comment

error: Content is protected !!