ಗುರುವಾಯನಕೆರೆ: ಇಲ್ಲಿನ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸರೋಜ್ ಆಹಾರ ಕೈಗಾರಿಕಾ ಘಟಕಕ್ಕೆ ಭೇಟಿ ನೀಡಿದರು.
ಆಹಾರ ಮತ್ತು ಪೌಷ್ಟಿಕಾಂಶ, ಆರೋಗ್ಯ ಮತ್ತು ರುಚಿಯ ಪರಿಪೂರ್ಣ ಮಿಶ್ರಣ ಸರೋಜ್ ಫುಡ್ಸ್ ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಖಾರದ ತಯಾರಕರ ಪ್ರಮುಖ ಘಟಕ ಇದಾಗಿದ್ದು, ಈ ಮೂಲಕ ಮಕ್ಕಳಿಗೆ ಪ್ರಾಯೋಗಿಕ ತರಬೇತಿ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿಬ್ಬಂದಿ ವರ್ಗದವರಿಂದ ಸರೋಜ್ ಫುಡ್ ಇಂಡಸ್ಟ್ರೀಸ್ ಹಿಂದಿನ ಪ್ರೇರಣೆ ಆಲಿಸಿದ ವಿದ್ಯಾರ್ಥಿಗಳು, ಭಾರತದ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಬಹುತೇಕ ಎಲ್ಲಾ ಸಾಂಪ್ರದಾಯಿಕ ಸಿಹಿತಿಂಡಿಗಳು ಸಾಮಾನ್ಯವಾಗಿ ಆರೋಗ್ಯಕ್ಕೆ ಕೆಟ್ಟ ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಹೆಚ್ಚು ಸಕ್ಕರೆ ಸೇವನೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಯಾವುದೇ ಸಂರಕ್ಷಕಗಳು ಮತ್ತು ಸಕ್ಕರೆಯನ್ನು ಹೊಂದಿರದ ಆಹಾರವನ್ನು ಸೇವಿಸುವ ಜನರಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ನಮ್ಮ ಪ್ರೇಕ್ಷಕರಿಗೆ ಸಾಂಪ್ರದಾಯಿಕ ಆಹಾರ ಉತ್ಪನ್ನಗಳನ್ನು ನೀಡುವ ಗುರಿಯೊಂದಿಗೆ 1997 ರಲ್ಲಿ ಸಕ್ಕರೆಯ ಬದಲಿಗೆ ಬೆಲ್ಲದಿಂದ ಮಾಡಿದ ಆರೋಗ್ಯಕರ ಸಿಹಿತಿಂಡಿಗಳನ್ನು ನೀಡಲು ಪ್ರಾರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಶೈಕ್ಷಣಿಕ ಚಟುವಟಿಕೆಗಳಿಗೆ ಸದಾ ಉತ್ಸಾಹ ತುಂಬಿ ವಿದ್ಯಾರ್ಥಿಗಳ ಕನಸಿಗೆ ಸಹಕಾರ ಒದಗಿಸುತ್ತಿರುವ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ನಮ್ಮೂರಿನ ಹೆಮ್ಮೆ ಈ ಕೈಗಾರಿಕಾ ವಲಯ, ಸ್ವದೇಶಿ ಹಾಗೂ ಪಾರಂಪರಿಕ ತಿಂಡಿ ತಿನಿಸುಗಳು ಆಧುನಿಕ ಆಹಾರ ಪದ್ಧತಿಗಳ ಮುಂದೆ ಕಣ್ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ವಾಣಿಜ್ಯ ವಿಭಾಗದ ಕಲಿಕೆಯೊಂದಿಗೆ ಸಾಂಪ್ರದಾಯಿಕ ಆಹಾರ ತಯಾರಿಕಾ ಕ್ರಮ ಹಾಗೂ ಅದರ ಮಾರುಕಟ್ಟೆಯ ಕುರಿತಾದ ಪ್ರಾಯೋಗಿಕ ಮಾಹಿತಿ ಸಿಗಬೇಕು ಎಂಬ ಪ್ರಯತ್ನ ಇದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ವಾಣಿಜ್ಯ ವಿಭಾಗದ ಮಕ್ಕಳಿಗೆ ನಮ್ಮ ದೇಶದಲ್ಲಿ ಪ್ರಾರಂಭದಲ್ಲಿ ಆಹಾರ ಮಾರುಕಟ್ಟೆ ವಿನ್ಯಾಸ ಹೇಗಿತ್ತು ಎಂಬ ಕಲ್ಪನೆಯನ್ನು ಮತ್ತು ಸ್ವದೇಶಿ ಉತ್ಪನ್ನಗಳ ಮಾರುಕಟ್ಟೆ ಸ್ಥಾಪನೆ ಮಾಡುವುದರ ಹಿಂದಿನ ಈಗಿನ ಅನಿವಾರ್ಯತೆಯ ಜೊತೆಗೆ ಅದರ ಆಗುಹೋಗುಗಳನ್ನು ತಿಳಿಸುವ ಕೆಲಸವನ್ನು ಇಂದಿನ ಕೈಗಾರಿಕಾ ಭೇಟಿ ಕಾರ್ಯಕ್ರಮ ಮಾಡಿರುತ್ತದೆ ಎಂದರು.
ಇದರೊಂದಿಗೆ ಮಕ್ಕಳು ಕೈಗಾರಿಕಾ ವಲಯದ ಕುರಿತಾಗಿ ಮಾಹಿತಿ ವಿನಿಮಯ , ವಿಚಾರ ವಿಮರ್ಶೆಯನ್ನು ಕೈಗೊಂಡರು. ಕೈಗಾರಿಕಾ ಭೇಟಿ ಕಾರ್ಯಕ್ರಮದ ನೇತೃತ್ವವನ್ನು ವಾಣಿಜ್ಯ ವಿಭಾಗದ ಡೀನ್ ಸಂತೋಷ್, ವಿಭಾಗ ಮುಖ್ಯಸ್ಥರಾದ ಪ್ರಸನ್ನ , ಲೆಕ್ಕಶಾಸ್ತ್ರ ಪ್ರಾಧ್ಯಾಪಕ ರವಿ ಹಾಗೂ ಆಂಗ್ಲಭಾಷಾ ಪ್ರಾಧ್ಯಾಪಕಿ ಅರ್ಪಿತಾ ಎಂ ಇವರು ವಹಿಸಿಕೊಂಡರು.