ಭವಿಷ್ಯದ ಚಿತ್ರರಂಗದ ಭರವಸೆಯ ಕಲಾವಿದ ರಾಜ್ ಚರಣ್ ಬ್ರಹ್ಮಾವರ್

Suddi Udaya

ಚಂದನವನದಲ್ಲಿ ಕರಾವಳಿಯ ಗಾಳಿ ಸೊಂಪಾಗಿ ಬೀಸುತ್ತಿರುವ ಕಾಲಘಟ್ಟದಲ್ಲಿ ಇನ್ನೊಬ್ಬ ಕರಾವಳಿಗ, ತನ್ನ ನಟನೆಯ ಘಮವನ್ನು ಸದ್ದಿಲ್ಲದೇ ಪಸರಿಸುವ ಕೈಂಕರ್ಯದಲ್ಲಿ ತೊಡಗಿಸಿ , ಭರವಸೆಯ ಛಾಪು ಮೂಡಿಸುತ್ತಿದ್ದಾರೆ. ತನ್ನ ಅಭಿನಯದ ಮೊದಲ ಕೊಡವ ಭಾಷಾ ಚಲನಚಿತ್ರ ಭೀರ್ಯ ಈ ವರ್ಷದ ಕರ್ನಾಟಕ ರಾಜ್ಯ ಸರ್ಕಾರ ದಿಂದ ಕೊಡಮಾಡುವ ನಂದಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಇವರ ಚಿತ್ರರಂಗದ ಪಯಣದ ಮೊದಲ ಗರಿಮೆಯಾಗಿದೆ.

ಅನಂತರದ ಚಲನಚಿತ್ರ ಕಾಮಧೇನು ಪ್ರಸ್ತುತ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಇತ್ತೀಚಿಗಷ್ಟೇ ತೆರೆಕಂಡು ಬೆಂಗಳೂರಿನ ಪ್ರಸನ್ನ ಚಿತ್ರ ಮಂದಿರದಲ್ಲಿ ಅಮೋಘ 50 ದಿನಗಳ ಪ್ರದರ್ಶನ ಕಂಡ ಪರಿಶುದ್ಧಂ ಚಲನಚಿತ್ರದಲ್ಲಿ ಸೈಕೋ ಶ್ಯಾಮನನ್ನು ನೋಡಿ ಹುಬ್ಬೇರಿಸದವರೇ ಇಲ್ಲ. ಅದ್ಭುತ 8 ನಿಮಿಷಗಳ ಸಾಹಸ, ಸ್ಪಷ್ಟ ಮಾತುಗಾರಿಕೆ , ನಟಿ ಸ್ಪರ್ಷ ರೇಖರವರ ಎದುರು ಮನಮುಟ್ಟುವ ಅಭಿನಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪ್ರಶಂಸೆಯ ನುಡಿನಮನಗಳು, ಭವಿಷ್ಯದ ಚಿತ್ರ ರಂಗದ ಒಬ್ಬ ಭರವಸೆಯ ಕಲಾವಿದನ ಛಾಯೆ ಮೂಡಿಸುವಂತಿದೆ.
ಚೊಚ್ಚಲ ಬಾರಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿರುವ “ ಜೈ ಗದಾ ಕೇಸರಿ “ ಚಲನಚಿತ್ರವು ಬಿಡುಗಡೆಯ ಹಂತದಲ್ಲಿದ್ದು, ಕನ್ನಡ ಚಲನಚಿತ್ರ ರಂಗವು ಮತ್ತೊಬ್ಬ ಭರವಸೆಯ ನಾಯಕ ನಟನ ನಿರೀಕ್ಷೆಯಲ್ಲಿದೆ.
ತೀರ್ಥಹಳ್ಳಿ ಜನ್ಮಭೂಮಿಯಾದರೆ, ಬ್ರಹ್ಮಾವರ ಬಾಲ್ಯದ ನೆನಪಿನ ಬುತ್ತಿಯಾಗಿ, ಪುತ್ತೂರಿನ ಕೂಡಮರ ತಂದೆಯ ಮನೆಯಾಗಿ, ಉಡುಪಿಯ ಕಲ್ಯಾಣಪುರ ಸದ್ಯದ ವಾಸ್ತವ್ಯ ದ ನೆಲೆಯಾಗಿ, ಬೆಂಗಳೂರು, ಕಲಾ ದೇವಿಯ ಸೇವೆಯ ಕರ್ಮಭೂಮಿಯಾಗಿ, ಕಲಾ ಸೇವೆಯಲ್ಲಿ ತೊಡಗಿರುವ ತುಳುನಾಡಿನ ರಾಜ್ ಚರಣ್ ಬ್ರಹ್ಮಾವರ್ ರವರಿಗೆ ಇನ್ನಷ್ಟು ಅವಕಾಶಗಳು, ದೊಡ್ಡಮಟ್ಟಿನ ಕೀರ್ತಿ, ಪ್ರಶಸ್ತಿ, ಪುರಸ್ಕಾರಗಳು ಲಭಿಸಲಿ. ಕಲಾದೇವಿ ತಾಯಿ ಸರಸ್ವತಿಯ ಸೇವೆಯಲ್ಲಿ , ಕಲಾ ಸಾಮ್ರಾಟರಾಗಿ, ದೇಶ ವಿದೇಶಗಳಲ್ಲಿ ಫ್ಯೂಚರ್ ಸ್ಟಾರ್ ರಾಜ್ ಚರಣ್ ಬ್ರಹ್ಮಾವರ್ ಇವರ ಕೀರ್ತಿ ಪತಾಕೆ ವಿಜ್ರಂಭಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Leave a Comment

error: Content is protected !!