ಬೆಳ್ತಂಗಡಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು , ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿದ ಕಾರಣದಿಂದ ಬರೆಯ ಮಣ್ಣು ಕುಸಿದು ಪೊಲೀಸ್ ಠಾಣೆಯ ಕಾಂಪೌಂಡ್ ಗೋಡೆ ಕುಸಿಯುವ ಸಾಧ್ಯತೆಯಿದೆ.
ಬೆಳ್ತಂಗಡಿ ತಾಲೂಕು ಕಛೇರಿಯ 105 ವರ್ಷದ ಹಿಂದಿನ ಕಟ್ಟಡವನ್ನು ಕೆಡವಿ ಆ ಜಾಗದಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಬಸ್ ನಿಲ್ದಾಣದ ಪಾರ್ಕಿಂಗ್ ಗಾಗಿ 10 ರಿಂದ 15 ಅಡಿ ಆಳದಲ್ಲಿ ಮಣ್ಣು ತೆಗೆಯಲಾಗಿದೆ. ಇದರ ಸುತ್ತಲೂ ತಾಲೂಕು ಕಛೇರಿ , ಪೊಲೀಸ್ ಠಾಣೆ , ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣ , ಗಿರಣಿ ಅಂಗಡಿಗಳಿದ್ದು , ಈ ಗುಂಡಿಯಲ್ಲಿ ಮಳೆ ನೀರು ನಿಂತು ಈಜುಕೊಳದಂತೆ ಬಾಸವಾಗುತ್ತಿದೆ. ಮತ್ತೊಂದೆಡೆ ತಡೆಗೋಡೆ ನಿರ್ಮಾಣ ಕಾರ್ಯ ನಡೆದು ಮಣ್ಣು ತುಂಬಿಸಲಾಗಿದ್ದರೂ ವಿಪರೀತ ಮಳೆಯ ಕಾರಣದಿಂದ ಪೋಲಿಸ್ ಠಾಣೆಯ ಭಾಗದಲ್ಲಿ ಮಣ್ಣು ಕುಸಿದಿದೆ. ಇನ್ನಷ್ಟು ಮಳೆ ಬಂದರೆ ಇನ್ನಷ್ಟು ಮಣ್ಣು ಕುಸಿದು ಪೋಲಿಸ್ ಠಾಣೆಯ ಕಾಂಪೌಂಡ್ ಗೋಡೆ ಕುಸಿದು ಅಪಾಯ ಉಂಟಾಗುವ ಸಾಧ್ಯತೆಯಿದೆ. ಅವೈಜ್ಞಾನಿಕ ರೀತಿಯಲ್ಲಿ ಕೆಲಸ ನಿರ್ವಹಣೆಯಿಂದ ಭೂಕುಸಿತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸೂಕ್ತ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯಕಾರಿ ಸನ್ನಿವೇಶ ಎದುರಾಗಬಹುದು ಎಂದು ಹೇಳಲಾಗುತ್ತದೆ.