ಅಡಿಕೆಯೊಂದಿಗೆ ಕಾಳುಮೆಣಸು ಮತ್ತು ಜಾಯಿಕಾಯಿ ಬೆಳೆಯುವ ರೈತರಿಗೆ ಸುವರ್ಣವಕಾಶ

Suddi Udaya

ಅಳದಂಗಡಿ: ಕರಾವಳಿಯ ಮುಖ್ಯ ಬೆಳೆಯಾಗಿರುವ ಅಡಿಕೆ ಈಗ ಮಲೆನಾಡು ಘಟ್ಟ ಪ್ರದೇಶಗಳಿಗೂ ವ್ಯಾಪಕವಾಗಿ ವ್ಯಾಪಿಸಿದೆ. ಹೊರ ರಾಜ್ಯಗಳಲ್ಲೂ ಹೇರಳವಾಗಿ ಅಡಿಕೆ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಅಡಿಕೆಯ ಭವಿಷ್ಯ ಯಾವ ಮಟ್ಟದಲ್ಲಿ ನಿಲ್ಲಬಹುದೆಂಬುದು ನಮ್ಮೆಲ್ಲರ ಮುಂದಿರುವ ಪ್ರಶ್ನೆ.

ಹೀಗಾಗಿ ನಾವು ಅಡಿಕೆಯ ಮಧ್ಯೆ ಉಪ ಬೆಳೆಯನ್ನು ಬೆಳೆಸುವತ್ತ ನಮ್ಮ ಚಿತ್ತವನ್ನು ಹರಿಸಬೇಕಾಗಿದೆ . ಇದಕ್ಕೆ ನಮಗಿರುವ ಮುಖ್ಯ ಅವಕಾಶಗಳು ಕಾಳುಮೆಣಸು ಹಾಗೂ ಜಾಯಿಕಾಯಿ ಕೃಷಿ .ಈ ಬೆಳೆಯ ಬಗ್ಗೆ ರೈತರಿಗೆ ವೈಜ್ಞಾನಿಕವಾಗಿ ತರಬೇತಿಯನ್ನು ನೀಡಿ ಅವರನ್ನು ಸುಸ್ಥಿರರನ್ನಾಗಿ ಮಾಡುವ ಉದ್ದೇಶದಿಂದ ನಾವು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕೃಷಿಕರು ಕಾಳುಮೆಣಸನ್ನು ಬೆಳೆಯುವ ಪದ್ದತಿಯನ್ನು ಕಳಿಯಬೇಕೆಂಬುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಪ್ಪು ಬಂಗಾರವೆಂದೇ ಕರೆಯಲಾಗುವ ಕಾಳು ಮೆಣಸಿಗೆ ಮಾರುಕಟ್ಟೆಯಲ್ಲೀಗ ಚಿನ್ನದ ಬೆಲೆ. ಇಷ್ಟೂ ದಿನಗಳು ಕಾಳು ಮೆಣಸನ್ನು ಕಡೆಗಣ್ಣಿನಿಂದ ನೋಡಿದವರೂ ಈಗ ಕಾಳು ಮೆಣಸಿನ ಕೃಷಿ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ. ಘಟ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕಾಳು ಮೆಣಸಿನ ಕೃಷಿ ಈಗ ಎಲ್ಲಾ ಪ್ರದೇಶಕ್ಕೂ ವಿಸ್ತರಣೆಗೊಳ್ಳುತ್ತಿದೆ.

ಎಲ್ಲಾ ಕಡೆಗಳಲ್ಲೂ ಕಾಳುಮೆಣಸು ಬೆಳೆಸುವ ಪ್ರಯತ್ನ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಅಡಿಕೆಯಷ್ಟೇ ಕಾಳುಮೆಣಸಿನ ಕಡೆಗೂ ಮುತುವರ್ಜಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದ್ದರಿಂದ ಜುಲೈ 20 ರಂದು ಅಳದಂಗಡಿ ಕೆದ್ದು ಶ್ರೀ ದೀಪಾ ಸಭಾಭವನದಲ್ಲಿ ನಡೆಯುವ ಕಾಳು ಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಕೃಷಿಕರು ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ರಾಕೇಶ್ ಹೆಗ್ಡೆ ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೇರವೇರಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಯಶಸ್ಸಿ ಕಾಳು ಮೆಣಸು ಕೃಷಿಕರಾದ ಸುರೇಶ್ ಬಲ್ನಾಡು, ಜಾಯಿಕಾಯಿ ಕೃಷಿಕ ಟಿ‌.ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಾಳುಮೆಣಸು, ಸಿಲ್ಲರ್ ವೋಕ್, ಕಾಫಿ ಬೆಳೆಗಾರ ಅಜಿತ್ ಪ್ರಸಾದ್ ರೈ ಕಾಯರ್ತಡಿ ಭಾಗವಹಿಸಲಿದ್ದಾರೆ.

Leave a Comment

error: Content is protected !!