ಆರ್ಥಿಕ ಹೊರೆಯಿಂದಾಗಿ ಅಭಿವೃದ್ಧಿಗೆ ಗ್ಯಾರಂಟಿಗಳು ಹೊಡೆತ: ರಾಜ್ಯವು ಆರ್ಥಿಕ ದಿವಾಳಿಯತ್ತ: ಪ್ರತಾಪಸಿಂಹ ನಾಯಕ್

Suddi Udaya

ಬೆಳ್ತಂಗಡಿ: ರಾಜ್ಯದ ಕಾಂಗ್ರೇಸ್ ಸರಕಾರವು ವರ್ಷವನ್ನು ಪೂರೈಸಿದ್ದೇ ತಡ ಸರಣಿ ಹಗರಣಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇದು ಭ್ರಷ್ಟಾಚಾರ ಮತ್ತು ಕಾಂಗ್ರೇಸ್ ಜೋಡಿಪದವಾಗಿರುವುದು ಪೂರ್ಣಪ್ರಮಾಣದಲ್ಲಿ ಸಾಬೀತಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಉಜಿರೆ ಹೇಳಿದ್ದಾರೆ.


ಒಂದೆಡೆ ಎಸ್.ಸಿ. ಮತ್ತು ಎಸ್.ಟಿ.ಯವರ ಅಭಿವೃದ್ಧಿಗಾಗಿ 2023ರಲ್ಲಿ 11,000 ಕೋಟಿ ರೂ. ಹಾಗೂ 2024ರಲ್ಲಿ ಮೀಸಲಿಟ್ಟ 14,000 ಕೋಟಿ ರೂಗಳನ್ನು ಕಾಂಗ್ರೇಸ್ ಸರಕಾರ ಗ್ಯಾರಂಟಿಗಳಿಗೆ ಉಪಯೋಗಿಸುತ್ತಿರುವುದು ಸಂವಿಧಾನಕ್ಕೆ ಅಪಚಾರವೆಸಗಿದಂತೆ. ಸಂವಿಧಾನದಲ್ಲಿ ಈ ರೀತಿಯ ಹಣವನ್ನು ಬೇರೆ ಯಾವುದಕ್ಕೂ ಬಳಸಬಾರದು ಎಂಬ ಸ್ಪಷ್ಟ ನಿರ್ದೇಶನವೇ ಇರುವಾಗ ದಲಿತರ, ಅಹಿಂದದ ಬಗ್ಗೆ ಕಾಳಜಿ ಇರುವ ಸಿದ್ಧರಾಮಯ್ಯ ಅವರು ದೊಡ್ಡ ಅಪರಾಧವನ್ನೇ ಎಸಗಿದ್ದಾರೆ. ಅಲ್ಲದೆ ಅವರು ಇದನ್ನು ಸಮರ್ಥಸಿಕೊಂಡಿರುವುದು ವಿಪರ್ಯಾಸವೇ ಆಗಿದೆ. ಅಲ್ಲದೆ ಇದರಿಂದ ಗ್ಯಾರಂಟಿಗಳಿಗೆ ಸರಕಾರದ ಹಣ ಇಲ್ಲ ಎಂಬುದು ನಿಚ್ಚಳವಾಗಿದೆ. ಆರ್ಥಿಕ ಹೊರೆಯಿಂದಾಗಿ ಅಭಿವೃದ್ಧಿಗೆ ಗ್ಯಾರಂಟಿಗಳು ಹೊಡೆತ ನೀಡುತ್ತಿದೆ. ರಾಜ್ಯವು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.


ಇನ್ನೊಂದೆಡೆ, ರಾಜ್ಯ ಸರಕಾರವು ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಸಿಲುಕಿಕೊಂಡವರನ್ನು ಬಚಾವ್ ಮಾಡಲು ಹೊರಟಿದೆ. ವಿಚಾರಣೆ ಆಗುತ್ತಿರುವಾಗಲೇ ಅವರು ತಪ್ಪೇ ಮಾಡಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಮತ್ತೊಂದೆಡೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡಾ)ದಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಸಿದ್ಧರಾಮಯ್ಯ ಅವರು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಮಗದೊಂದೆಡೆ ಪ್ರವಾಸೋದ್ಯಮ ಇಲಾಖೆಯಲ್ಲಿಸುಮಾರು 2.47 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಹಾಗೂ ಟ್ರಕ್ ಟರ್ಮಿನಲ್ ಹಗರಣದಲ್ಲಿ ಸುಮಾರು 3 ಕೋಟಿ ರೂ. ಲಂಚ ವರ್ಗಾವಣೆ ಪತ್ತೆಯಾಗಿರುವ ವಿದ್ಯಮಾನವು ಸರಕಾರದ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಸಾಲು ಸಾಲು ಹಗರಣಗಳ ಆಡಳಿತವು ಸಿದ್ಧರಾಮಯ್ಯ ಸರಕಾರದ್ದಾಗಿದೆ. ಅವರು ಅಧಿಕಾರದಿಂದ ಇಳಿಯುವ ಸಮಯ ಸನ್ನಿಹಿತವಾಗಿದೆ ಎಂದು ನಾಯಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment

error: Content is protected !!