ಬೆಳ್ತಂಗಡಿ: ಕರ್ತವ್ಯ ಲೋಪ ಎಸಗಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ಮಿಯಾಜ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾ.ಪಂ. ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ ಘಟನೆ ಜು.15ರಂದು ಕುವೆಟ್ಟು ಗ್ರಾ.ಪಂ.ನಲ್ಲಿ ನಡೆದಿದೆ.
ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಇಮ್ಮಿಯಾಜ್ ರವರು ಪಂಚಾಯತ್ ನ ಎಲ್ಲಾ ನಿರ್ಣಯಗಳನ್ನು ಮೀರಿ ಅಧಿಕಾರ ದುರುಪಯೋಗ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ. ಅಲ್ಲದೇ ಆಡಳಿತ ಮಂಡಳಿಯ ಸದಸ್ಯರ ಹಕ್ಕು ಚ್ಯುತಿ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತ್ 24 ಸದಸ್ಯರ ಪೈಕಿ 18 ಮಂದಿ ಸದಸ್ಯರು ಸಭೆ ಬಹಿಷ್ಕರಿಸಿದರು.
ಗ್ರಾ.ಪಂ.ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಹಾಜರಾಗಿದ್ದ ಗಣೇಶ್ ಕೆ., ವೇದಾವತಿ, ಲಕ್ಷ್ಮೀಶ, ಆನಂದಿ, ವನಿತಾ, ವಿಜಯಲಕ್ಷ್ಮೀ, ಸದಾನಂದ ಮೂಲ್ಯ, ನಿತೇಶ್, ನಿತಿನ್, ಮಂಜುನಾಥ್, ರಚನಾ, ಪ್ರದೀಪ್ ಶೆಟ್ಟಿ, ಹೇಮಂತ್, ಉಷಾ, ಶಾಲಿನಿ, ಸುಮಂಗಲಾ, ಸಿಲ್ವೆಸ್ಟರ್ ಮೋನಿಸ್, ಆಶಾಲತಾ ಸಭೆಯನ್ನು ಬಹಿಷ್ಕರಿಸಿದರು.
ಆದರೆ ಸದಸ್ಯರಾದ ಮೈಮುನಿಸಾ, ಮಹಮ್ಮದ್ ಮುಸ್ತಾಫ, ಅಮಿನಾ, ಶಮೀಮುಲಾ ಕೆ. ಸಭೆಯಲ್ಲಿ ಮುಂದುವರಿದರು.ಆದರೆ ಕೋರಂ ಕೊರತೆ ಉಂಟಾದ ಹಿನ್ನಲೆಯಲ್ಲಿ ಅಧ್ಯಕ್ಷೆ ಭಾರತಿ ಎಸ್.ಶೆಟ್ಟಿ ಸಭೆಯನ್ನು ಮುಂದೂಡಿದರು.