ತಣ್ಣೀರುಪಂತ : 1992ರಲ್ಲಿ ಹಿಂದಿನ ಇಳಂತಿಲ ಮಂಡಲ ಪಂಚಾಯತ್‌ಗೆ ವಾರದ ಸಂತೆ ಮಾರುಕಟ್ಟೆಗೆ ಮೀಸಲಿರಿಸಲಾದ ಕರಾಯ ಗ್ರಾಮದ ಸರ್ವೆ ನಂಬ್ರ: 12/3ಡಿ2 ರಲ್ಲಿನ 0.48 ಎಕ್ರೆ ಜಮೀನು, 1993-94ನೇ ಸಾಲಿನಲ್ಲಿ ಗ್ರಾಮ ಪಂಚಾಯತ್ ರಚನೆಯ ಬಳಿಕ ತಣ್ಣೀರುಪಂತ ಗ್ರಾಮ ಪಂಚಾಯತಿಗೆ ಹಸ್ತಾಂತರಗೊಂಡಿದ್ದು, ಹಲವು ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದರಿಂದ ಈ ಜಾಗವನ್ನು ಖಾಸಗಿಯವರ ಒತ್ತುವರಿ ಮಾಡಿ ಕೃಷಿಯನ್ನು ಮಾಡಿದ್ದರು. ಹಾಗೂ ಇನ್ನೊಂದು ಭಾಗದಲ್ಲಿ ಕಟ್ಟಡವನ್ನು ರಚಿಸಿ ವ್ಯಾಪಾರವನ್ನು ನಡೆಸುತ್ತಿದ್ದರು.
ಜಮೀನಿನ ಅತಿಕ್ರಮಣವನ್ನು ತಿಳಿದ ತಣ್ಣೀರುಪಂತ ಗ್ರಾ.ಪಂ ಸಲ್ಲಿಸಿದ ಮನವಿ ಮೇರೆಗೆ ಆಗಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರ ಉಪಸ್ಥಿತಿಯಲ್ಲಿ ಜಾಗದ ಗಡಿಗುರುತು ನಡೆದು ಜಾಗಕ್ಕೆ ಬೇಲಿ ಅಳವಡಿಸಲಾಗಿತ್ತು. ಇದರ ವಿರುದ್ಧ ಜಾಗ ಅತಿಕ್ರಮಣ ಮಾಡಿ ಕೃಷಿ ಮಾಡಿಕೊಂಡಿದ್ದವರು ಉಚ್ಚ ನ್ಯಾಯಾಲದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಗ್ರಾಮ ಪಂಚಾಯತು ಪರ ತೀರ್ಪು ಬಂದಿತ್ತು.
ಕಳೆದ ಜೂ.20 ರಂದು ತಣ್ಣೀರುಪಂತ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ಆದೇಶದ ಬಗ್ಗೆ ಚರ್ಚೆ ನಡೆದು ತಹಶೀಲ್ದಾರರಿಗೆ ಗಡಿಗುರುತು ಮಾಡುವರೇ ಮನವಿಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು. ಅಲ್ಲದೇ, ಈ ಬಾರಿ ಗಡಿಗುರುತು ಮಾಡಿದ ಜಮೀನನ್ನು ತಣ್ಣೀರುಪಂತ ಗ್ರಾಮ ಪಂಚಾಯತಿಯು ಸಂಪೂರ್ಣವಾಗಿ ಸ್ವಾಧೀನ ಪ್ರಕ್ರಿಯೆಯನ್ನು ನಡೆಸಿಕೊಳ್ಳುವ ದೃಢ ಸಂಕಲ್ಪವನ್ನು ಮಾಡಲಾಯಿತು.
ಅದರಂತೆ ಜು. 12ರಂದು ತಹಶೀಲ್ದಾರರ ಆದೇಶದಂತೆ ಭೂಮಾಪಕ ಮಲ್ಲು, ಕಂದಾಯ ನಿರೀಕ್ಷಕರು ಪಾವಡಪ್ಪ ದೊಡ್ಡಮನಿ, ಪ್ರಭಾರ ಪಿಡಿಓ ಶ್ರವಣ್ ಮತ್ತು ಕಾರ್ಯದರ್ಶಿ ಅವರ ಸಮಕ್ಷಮ ಭೂಮಾಪನಾ ಕಾರ್ಯ ನಡೆಸಿ, ಗಡಿಗುರುತು ನಡೆಸಲಾಯಿತು. ಈ ಸಂದರ್ಭದಲ್ಲಿ ಖಾಸಗಿಯವರು ಪಂಚಾಯತ್‌ಗೆ ಮೀಸಲಿರಿಸಿದ ಜಮೀನಿನಲ್ಲಿ ಅತಿಕ್ರಮಿಸಿ ಬೆಳೆಸಿದ ಅಂದಾಜು 30 ಅಡಿಕೆ ಮರ, 5 ತೆಂಗಿನ ಮರ, 4 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸಿ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು.
ಗಡಿಗುರುತು ಮಾಡಿದ ಜಮೀನಿನ ಇನ್ನೊಂದು ಭಾಗದಲ್ಲಿ ಖಾಸಗಿಯವರ ವಾಣಿಜ್ಯ ಕಟ್ಟಡದ ಒಂದು ಕೋಣೆ ಮತ್ತು ಸದ್ರಿ ಕೊಠಡಿಯ ಹಿಂಭಾಗದಲ್ಲಿರುವ ಅಪೂರ್ಣಕೊಠಡಿಗಳ ಕುರಿತಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನವನ್ನು ತಿಳಿಸಲಾಗುವುದು ಎಂದು ತಿಳಿದುಬಂದಿದೆ. ಗಡಿಗುರುತು ಸಂದರ್ಭದಲ್ಲಿ ಉಪ್ಪಿನಂಗಡಿ ಪೋಲಿಸ್ ಬಂದೋಬಸ್ತ್ ಒದಗಿಸಿದ್ದರು. ಅಂತೂ ಕಳೆದ ಹಲವು ಗ್ರಾಮಸಭೆಗಳಲ್ಲಿ ಚರ್ಚೆಗೆ ಬರುತ್ತಿದ್ದ ಈ ವಿಷಯಕ್ಕೆ ತಾರ್ಕಿಕ ಅಂತ್ಯ ಬಿದ್ದಿದೆ.
ಗಡಿಗುರುತು ಮತ್ತು ಸ್ವಾಧೀನ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿ ತಣ್ಣೀರುಪಂತ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಹೇಮಾವತಿ, ಉಪಾಧ್ಯಕ್ಷೆ ಶ್ರೀಮತಿ ಪ್ರಿಯಾ, ಸದಸ್ಯರಾದ ಜಯ ವಿಕ್ರಮ, ಸದಾನಂದ ಶೆಟ್ಟಿ, ಆಯೂಬ್ ಡಿ.ಕೆ, ಸಾಮ್ರಾಟ್, ಶ್ರೀಮತಿ ಲೀಲಾವತಿ, ಮಹಮ್ಮದ್ ನಿಸಾರ್, ತಾಜುದ್ದೀನ್ , ಅನಿಲ್ , ನವೀನ್ ಕುಮಾರ್ ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.