ಶಿಶಿಲ: ಇತಿಹಾಸ ಪ್ರಸಿದ್ಧ ಮತ್ಯತೀರ್ಥ ಎಂದೇ ಖ್ಯಾತವಾದ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಸಮೀಪ ಹರಿಯುತ್ತಿರುವ ಕಪಿಲ ನದಿಯಲ್ಲಿ ಇಂದು ಸಂಜೆಯಿಂದ ನಿರಂತರವಾಗಿ ಪ್ರವಾಹ ಏರಿಕೆಯಾಗುತ್ತಿದ್ದು, ದೇವಸ್ಥಾನದ ಒಳಗೆ ನೀರು ನುಗ್ಗಿದೆ.
ಕಪಿಲ ನದಿಯಲ್ಲಿ ಇಂದು ಮಧ್ಯಾಹ್ನದ ನಂತರ ನದಿಯಲ್ಲಿ ಪ್ರವಾಹ ಏರಿಕೆಯಾಗುತ್ತಾ ಬಂದಿದ್ದು ಸಂಜೆ ವೇಳೆ ಉಕ್ಕಿ ಹರಿದ ಕಪಿಲ ನದಿಯ ಪ್ರವಾಹ ದೇವಸ್ಥಾನದ ಒಳಗೆ ನುಗ್ಗಿದೆ. ಬೈರಾಪುರ ಘಾಟಿಯಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಕಪಿಲ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಲಾರಂಭಿಸಿದ್ದು, ಪ್ರವಾಹದ ಜೊತೆ ದೊಡ್ಡ, ದೊಡ್ಡ ಗಾತ್ರದ ಮರಗಳು ಬರುತ್ತಿದ್ದು, ಶಿಶಿಲದ ಕಿಂಡಿಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಇದರಿಂದಾಗಿ ಪ್ರವಾಹ ಹರಿಯಲು ಅಡ್ಡಿಯಾಗಿ ನೀರು ಏರುತ್ತಿದೆ. ಈ ವರ್ಷ ಪ್ರಥಮ ಬಾರಿಗೆ ನೀರು ದೇವಸ್ಥಾನದ ಅಂಗಳಕ್ಕೆ ಬಂದು ದೇವಸ್ಥಾನದ ಒಳಗೆ ನುಗ್ಗಿದೆ.ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ದೇವಸ್ಥಾನ ಪರಿಸರದಲ್ಲಿ ಆನೇಕ ಮನೆಗಳಿದ್ದು, ದೇವಸ್ಥಾನದ ಅಂಗಳ ತನಕ ನೀರು ಬಂದಿರುವುದರಿಂದ ಈ ಮನೆಯವರು ಭಯಭೀತರಾಗಿದ್ದಾರೆ. ಪ್ರವಾಹದಲ್ಲಿ ಇನ್ನಷ್ಟು ಮರಗಳು ಬಂದು ಕಿಂಡಿಅಣೆಕಟ್ಟಿನಲ್ಲಿ ಸಿಲುಕಿಕೊಂಡರೆ ಪ್ರವಾಹ ಮತ್ತಷ್ಟು ಏರುವ ಸಾಧ್ಯತೆಯಿಂದ ಎನ್ನುತ್ತಾರೆ ಶಿಶಿಲ ಗ್ರಾ.ಪಂ ಅಧ್ಯಕ್ಷ ಸುಧೀನ್ ಬಿ. ಅವರು. ಶಿಶಿಲ ಪೇಟೆಗೆ
ಬಂದವರು ಇದೀಗ ಕಿಂಡಿಅಣೆಕಟ್ಟು ಮುಳುಗಿರುವುದರಿಂದ ನದಿ ದಾಟಲು ಸಂಕಷ್ಟ ಅನುಭವಿಸುವಂತಾಗಿದೆ. ಕೊಳಕೆ ಬೈಲು ಪ್ರದೇಶದವರು ದೂರದ ದಾರಿ ಮೂಲಕ ತಮ್ಮ ಮನೆಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.