ದ.ಕ. ಜಿಲ್ಲೆಯ ಎಲ್ಲಾ ಶಾಲಾ ಆವರಣದಲ್ಲಿ ಧಾರ್ಮಿಕ ಆಚರಣೆಗೆ ಬ್ರೇಕ್: ರಾಜ್ಯ ಸರ್ಕಾರ ಹಿಂದೂ ವಿರೋಧಿ ನಿಲುವನ್ನು ಮತ್ತೆ ವ್ಯಕ್ತ ಪಡಿಸಿದೆ: ಹರೀಶ್ ಪೂಂಜ

Suddi Udaya

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಶಾಲೆಗಳ ಆವರಣಗಳಲ್ಲಿ ಇನ್ಮುಂದೆ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ಅಥವಾ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಜು. 16ರಂದು ಆದೇಶ ಹೊರಡಿಸಿದ್ದಾರೆ.

ಈವರೆಗೂ ದ.ಕ ಜಿಲ್ಲಾ ಶಾಲಾ ಆವರಣಗಳಲ್ಲಿ ಸಾರ್ವಜನಿಕವಾಗಿ ನಡೆಯುತ್ತಿದ್ದ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಮುಂತಾದ ಹಬ್ಬಗಳ ಆಚರಣೆಗೆ ಇನ್ಮುಂದೆ ನಿಷೇಧ ಹೇರಲಾಗಿದ್ದು, ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಈ ಕುರಿತು ಹೊರಡಿಸಿದ ಜ್ಞಾಪನಾ ಪತ್ರ ಈಗ ವಿವಾದಕ್ಕೆ ಕಾರಣವಾಗಿದೆ.

ಈ ವಿಚಾರ ಸಂಬಂಧ ಪಟ್ಟಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಕರ್ನಾಟಕದಲ್ಲಿರುವಂತಹ ರಾಜ್ಯ ಸರ್ಕಾರ ಹಿಂದೂ ವಿರೋಧಿ ನಿಲುವನ್ನು ಮತ್ತೆ ವ್ಯಕ್ತಪಡಿಸಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಶೈಕ್ಷಣೀಕೇತರ ಕಾರ್ಯಕ್ರಮವನ್ನು ಮಾಡಬಾರದು ಎನ್ನುವ ಆದೇಶವನ್ನು ಹೊರಡಿಸಿದ್ದು, ಸಾರ್ವಜನಿಕ ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಸಮಿತಿಯವರು ಅನುಮತಿ ಕೇಳುವುದಕ್ಕೆ ಶಾಲೆಗೆ ಹೋದ ಸಂದರ್ಭದಲ್ಲಿ, ಶಾಲೆಯ ಮುಖ್ಯ ಶಿಕ್ಷಕರು ನಮಗೆ ಯಾವುದೇ ರೀತಿಯ ಅನುಮತಿಯನ್ನು ಕೊಡುವುದಕ್ಕೆ ಸಾಧ್ಯವಿಲ್ಲ, ಸರಕಾರ ಈ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ ಎಂದರು.

ರಾಹುಲ್ ಗಾಂಧಿ ಯವರ ಹಿಂದೂವಿರೋಧಿ ನೀತಿಯನ್ನು ಈ ರಾಜ್ಯದಲ್ಲಿ ಅನುಸ್ಥಾನ ಗೊಳಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಸಿದ್ದರಾಮಯ್ಯ ನವರ ಸರಕಾರ ಇವತ್ತು ಈ ರೂಪದಲ್ಲಿ ಮಾಡುತ್ತಿದೆ ಎನ್ನುವಂತಹ ಆರೋಪವನ್ನು ನಾನು ಮಾಡುತ್ತೇನೆ. ಅನೇಕ ಇತಿಹಾಸ ಇರುವಂತಹ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಕಾರ್ಯಕ್ರಮಗಳನ್ನು ಈ ಸುತ್ತೋಲೆಯ ಮೂಲಕ ಹತ್ತಿಕ್ಕಿ ಹಿಂದೂಗಳ ಭಾವನೆಗೆ ದಕ್ಕೆಯನ್ನು ತರುವಂತಹ ಕೆಲಸವನ್ನು ಕಾಂಗ್ರೆಸ್ ನ ಸಿದ್ದರಾಮಯ್ಯ ನವರ ಸರಕಾರ ಮಾಡುವುದಕ್ಕೆ ಹೊರಟ್ಟಿದ್ದಾರೆ.

ಬೆಳ್ತಂಗಡಿಯಲ್ಲಿ ಅನೇಕ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ನಡೆಯುತ್ತ ಬಂದಿದ್ದು, ಶಾಲೆಯ ಮುಖ್ಯೋಪಾಧ್ಯಾಯರ ಬಳಿಗೆ ಸ್ಥಳೀಯವಾಗಿರುವಂತಹ ಗಣೇಶೋತ್ಸವ ಸಮಿತಿ ಯವರು ಮತ್ತು ಕೃಷ್ಣ ಜನ್ಮಾಷ್ಟಮಿ ಸಮಿತಿಯವರು ಅನುಮತಿಗೆ ಹೋದಂತಹ ಸಂದರ್ಭದಲ್ಲಿ ಈ ಸುತ್ತೋಲೆಯನ್ನು ಮುಖ್ಯೋಪಾಧ್ಯಾಯರು ಕೊಟ್ಟಿದ್ದಾರೆ. ನಮಗೆ ಯಾವುದೇ ಕಾರಣಕ್ಕೂ ಇದನ್ನು ಅನುಮತಿ ಕೊಡುವುದಕ್ಕೆ ಆಗುವುದಿಲ್ಲ, ಈ ರೀತಿಯ ಸುತ್ತೋಲೆ ಬಂದಿದೆ ಎನ್ನುವಂತಹದ್ದು ನನ್ನ ಗಮನಕ್ಕೆ ಬಂದಿದೆ ಎಂದರು.

ಡಿಡಿಪಿಐ ಹೊರಡಿಸಿದ ಜ್ಞಾಪನಾ ಪತ್ರದಲ್ಲಿ ಏನಿದೆ?:

ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಮೈದಾನ ಅಥವಾ ಆವರಣವನ್ನು ಯಾವುದೇ ಸಂದರ್ಭದಲ್ಲಿ ಶೈಕ್ಷಣಿಕೇತರ ಚಟುವಟಿಕೆ ಅಥವಾ ಉದ್ದೇಶಕ್ಕೆ ಬಳಸಬಾರದು ಮತ್ತು ಅನುಮತಿಯನ್ನೂ ನೀಡಬಾರದು. ಅಲ್ಲದೆ ಅನುಮತಿಗಾಗಿ ಡಿಡಿಪಿಐ ಕಚೇರಿಗೂ ಪ್ರಸ್ತಾವನೆ ಸಲ್ಲಿಸಬಾರದು ಎಂದು ಖಡಕ್ ಸೂಚನೆ ನೀಡಲಾಗಿದೆ. ಈ ಆದೇಶ ಉಲ್ಲಂಘಿಸಿದಲ್ಲಿ ಸಂಬಂಧಿತ ಶಾಲಾ ಮುಖ್ಯಸ್ಥರೇ ಹೊಣೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Leave a Comment

error: Content is protected !!