ಬೆಳ್ತಂಗಡಿ: ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಶೃಂಗೇರಿಯ ಶಾರದಾಂಬೆಯ ಶ್ರೀಮಠದಲ್ಲಿ ಹೊಸ ನಿಯಮ ಜಾರಿಯಾಗಲಿದೆ. ಆ.15ರಿಂದ ಇಲ್ಲಿಗೆ ಭೇಟಿ ನೀಡುವಂತ ಪ್ರವಾಸಿಗರು, ಯಾತ್ರಾರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅವುಗಳ ಹೊರತಾಗಿ ಬೇರೆ ಉಡುಪು ಧರಿಸಿ ಬಂದ್ರೆ ಶ್ರೀಮಠಕ್ಕೆ ಎಂಟ್ರಿ ಇರೋದಿಲ್ಲ. ಈ ಬಗ್ಗೆ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀಶಾರದಾ ಪೀಠದ ಆಡಳಿತಾಧಿಕಾರಿ ಮತ್ತು ಸಿಇಓ ಪಿ.ಎ ಮುರಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶ್ರೀಮಠ ಶೃಂಗೇರಿಗೆ ಆಗಮಿಸುವ ಎಲ್ಲಾ ಭಕ್ತರು, ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಲು ವಿನಂತಿಸಿದ್ದಾರೆ.
ಶೃಂಗೇರಿಯ ಶಾರದಾಂಬೆ ದರ್ಶನಕ್ಕೆ ಆ.15ರಿಂದ ಭೇಟಿ ನೀಡುವಂತಹ ಪುರುಷರು ಕಡ್ಡಾಯವಾಗಿ ಧೋತಿ ಅಥವಾ ಪಂಚೆ, ಶಲ್ಯ ಧರಿಸಿ ಬರಬೇಕಿದೆ. ಮಹಿಳೆಯರು ಸೀರೆ, ಚೂಡಿದಾರ್, ಪೈಜಾಮ, ದುಪ್ಪಟ್ಟದೊಂದಿಗೆ ಅಥವಾ ಲಂಗಾ-ದಾವಣಿ ಧರಿಸಿ ತೆರಳಿದ್ರೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲವಾದಲ್ಲಿ ಪ್ರವೇಶ ನಿಷೇಧ, ಹೊರಗಡೆಯಿಂದಲೇ ದರ್ಶನ ಪಡೆಯಬಹುದಾಗಿದೆ.