ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ದೈಹಿಕ ಶಿಕ್ಷಕ ಮರೋಡಿ ಗ್ರಾಮದ ಪ್ರಶಾಂತ್ ಅವರು ಇನ್ನು ಮುಂದೆ ತಮ್ಮ ಸ್ವ ಗ್ರಾಮದ ಶಾಲೆ ಕೂಕ್ರಬೆಟ್ಟು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಸುಮಾರು 17 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಬಂದಾರು ದ.ಕ.ಜಿ.ಪಂ.ಉ.ಪ್ರಾ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ತಮ್ಮ ಶಿಷ್ಯವೃಂದ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಲು ಕಾರಣೀಭೂತರಾಗಿದ್ದಾರೆ.ತಮ್ಮ ಶಾಲಾ ಹಂತದಲ್ಲೇ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದು ,ಅದೇ ಕ್ಷೇತ್ರದಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ತಮ್ಮ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದರು. ಇವರಿಂದ ತರಬೇತಿ ಪಡೆದ ಬಂದಾರು ಶಾಲೆಯ ಮಕ್ಕಳು ಪ್ರತೀ ವರ್ಷ ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ,ರಾಷ್ಟ್ರ ಮಟ್ಟದವರೆಗೂ ತಲುಪಿ ಗಮನೀಯ ಸಾಧನೆ ಮಾಡಿದ್ದಾರೆ .ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದ ವಾಲಿಬಾಲ್ ಸ್ಪರ್ಧೆಯಲ್ಲಿ ಬಂದಾರು ಶಾಲೆಯ 3 ವಿದ್ಯಾರ್ಥಿನಿಯರು ಕರ್ನಾಟಕ ರಾಜ್ಯ ತಂಡದಿಂದ ಆಯ್ಕೆಯಾಗಿ ಕಂಚಿನ ಪದಕ ಪಡೆದಿರುತ್ತಾರೆ .ಇವರ ಗರಡಿಯಲ್ಲಿ ಪಳಗಿದ 16 ಕ್ರೀಡಾಪಟುಗಳು ರಾಷ್ಟ್ರ ಮಟ್ಟಕ್ಕೆ, 20 ಕ್ಕೂ ಅಧಿಕ ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಹಾಗು 45 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೈಸೂರು ವಿಭಾಗಕ್ಕೆ ಆಯ್ಕೆಯಾಗಿರುವುದು ಇವರ ಕಾರ್ಯ ಕ್ಷಮತೆ ,ಪ್ರಾಮಾಣಿಕ ಸೇವೆಗೆ ಸಂದ ಗೌರವ.ಪ್ರಶಾಂತ್ ಅವರು ತಾಲೂಕಿನ ಕೂಕ್ರಬೆಟ್ಟು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಲಿದ್ದಾರೆ.