ಮರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರೋಡಿ ಮತ್ತು ಪೆರಾಡಿ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಎಲ್ಲೆಡೆ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭೂಕುಸಿತ, ಮರಗಳು ಧರೆಗೆ ಉರುಳಿದ್ದು, ರಸ್ತೆಗಳಿಗೆ ಹಾನಿ, ಕೃಷಿ ನಾಶದಂತಹ ಅನಾಹುತಗಳು ಸಂಭವಿಸಿವೆ.
ಮರೋಡಿ ಗ್ರಾಮದ ಶಾಂತಿ ನಗರದಿಂದ ದೇರಾಜೆ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿತ, ಕಾಯೇರುಬೈಲು ರಸ್ತೆಯ ರಾಗಿಮೇಲು ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ.
ಪಾಣಾಲು ಸೇತುವೆಗೆ ಹಾನಿ, ಕೋಂಟಡ್ಕ ಎಂಬಲ್ಲಿ ಮೋರಿ ಕುಸಿತ, ಉಳಗುಡ್ಡೆ ಎಂಬಲ್ಲಿ ಮರಬಿದ್ದು ವಿದ್ಯುತ್ ಲೈನಿಗೆ ಹಾನಿ, ಕಲ್ಲಟ್ಟ ಎಂಬಲ್ಲಿ ಕಾಲುಸಂಖ ಕೊಚ್ಚಿ ಹೋಗಿ ಸಂಪರ್ಕ ಕಡಿತ, ಪೆರಾಡಿ ಗ್ರಾಮದ ಬೀರೊಟ್ಟು ಎಂಬಲ್ಲಿ ರಸ್ತೆಯ ತಡೆಗೋಡೆ ಕೊಚ್ಚಿ ಹೋಗಿದ್ದು, ನೆಲ್ಲಿಂಗೇರಿ ಕ್ರಾಸ್ ಬಳಿ ರಸ್ತೆ ಸಂಚಾರಕ್ಕೆ ಅಡಚಣೆಯಂತಹ ಪ್ರದೇಶಗಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಬುಣ್ಣಾನ್, ಪಿಡಿಒ ಆಶಾಲತಾ ಎಚ್, ಸದಸ್ಯರಾದ ಪದ್ಮಶ್ರೀ ಜೈನ್, ಅಶೋಕ ಪೂಜಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡರು.