ಬೆಳ್ತಂಗಡಿ: ನಿರಂತರ ಅಧ್ಯಯನದಿಂದ ಜ್ಞಾನವನ್ನು ಪಡೆಯುವುದರೊಂದಿಗೆ ಯಶಸ್ವಿ ಜೀವನದ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ದಿವ್ಯ ಕುಮಾರಿ ಹೇಳಿದರು.
ಅವರು ವಾಣಿ ಪದವಿಪೂರ್ವ ಕಾಲೇಜಿನ ಕಲಾ ಸಂಘದ ವತಿಯಿಂದ ನಡೆದ ನಾಗರಿಕ ಸೇವೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ಎನ್ನುವ ವಿಚಾರದ ಕುರಿತು ಮಾತನಾಡುತ್ತಾ, ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ಕೊಡುವುದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದಕ್ಕೆ ಪ್ರೋತ್ಸಾಹ ಕೊಡಬೇಕು. ಪತ್ರಿಕೆಗಳನ್ನು ಓದುವ ಮೂಲಕ ಪ್ರಚಲಿತ ವಿಷಯಗಳನ್ನು ತಿಳಿದುಕೊಳ್ಳಬೇಕು. ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಬುದ್ಧಿವಂತಿಕೆಯಿಂದ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಬೇಕು. ಪ್ರತಿಯೊಬ್ಬನೂ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ತಿಳಿದಿರಬೇಕು. ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಶಾಪವಾಗಿ ಪರಿಣಮಿಸದೆ ಅದನ್ನು ಜ್ಞಾನಕ್ಕಾಗಿ ಬಳಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ, ಕಲಾಸಂಘದ ಸಂಯೋಜಕರಾದ ರವಿಶಂಕರ್ ಉಪಸ್ಥಿತರಿದ್ದರು.
ಉಪನ್ಯಾಸಕ ದಿನೇಶ್ ಸ್ವಾಗತಿಸಿದರು. ಕುಮಾರಿ ಸೃಜನಿ ಧನ್ಯವಾದವಿತ್ತರು. ವಿದ್ಯಾರ್ಥಿ ಶಾರೋನ್ ಕಾರ್ಯಕ್ರಮ ನಿರೂಪಿಸಿದರು.