ಬೆಳ್ತಂಗಡಿ ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜ ಪ್ರಮಾಣ: ನಾನು ಯಾರಿಂದಲೂ ಹಣವನ್ನು ಪಡೆದಿಲ್ಲ, ಭ್ರಷ್ಟಾಚಾರ ನಡೆಸಿಲ್ಲ: ದೀಪ ಬೆಳಗಿಸಿ, ಮಾರಿಗುಡಿ ಎದುರು ತೆಂಗಿನ ಕಾಯಿ ಒಡೆದು ಪ್ರಮಾಣ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ನೂತನ ಐಬಿ ಕಾಮಗಾರಿಯಲ್ಲಿ ಒಂದು ರೂಪಾಯಿಯನ್ನು ತೆಗೆದುಕೊಂಡಿಲ್ಲ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರಿಂದ ಹಣ ಪಡೆದಿಲ್ಲ, ಭ್ರಷ್ಟಾಚಾರ ನಡೆಸಿಲ್ಲ, ರೆಖ್ಯದ ಕಾಮಗಾರಿಯಲ್ಲಿ ಹಣ ಪಡೆದುಕೊಂಡಿಲ್ಲ, ಬಿಮಲ್ ಕಂಪೆನಿಯಲ್ಲಿ ನನ್ನ ಪಾಲುದಾರಿಕೆ, ಹೂಡಿಕೆ ಇಲ್ಲ, ಅವರಿಂದ ಒಂದು ರೂಪಾಯಿಯನ್ನು ತೆಗೆದುಕೊಂಡಿಲ್ಲ , ಮರುಳು ಗಾರಿಕೆದಾರರಿಂದ, ಮರದ ದಂಧೆ ನಡೆಸುವವರಿಂದ ಹಣ ಪಡೆದು ಭ್ರಷ್ಟಾಚಾರ ನಡೆಸಿಲ್ಲ ಎಂದು ಆ.14 ರಂದು ಬೆಳಿಗ್ಗೆ ಕಾರಣಿಕ ಕ್ಷೇತ್ರ ಬೆಳ್ತಂಗಡಿ ಮಾರಿಗುಡಿಯಲ್ಲಿ ದೇವಿಯ ಎದುರು ನಿಂತು ಶಾಸಕ ಹರೀಶ್ ಪೂಂಜ ಪ್ರಮಾಣ ಮಾಡಿದರು.


ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಮಾಡಿದ ಆರೋಪಗಳಿಗೆ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಷ್ಟನೆ ನೀಡಿದ್ದ ಶಾಸಕರು ರಕ್ಷಿತ್ ಶಿವರಾಂ ಅವರು ಮಾಡಿರುವ ವಿವಿಧ ಆರೋಪಗಳಿಗೆ ನಾಳೆ ಬೆಳ್ತಂಗಡಿ ಮಾರಿಗುಡಿಯಲ್ಲಿ ಪ್ರಮಾಣ ಮಾಡುತ್ತೇನೆ. ನಾನು ಹೇಳಿದ್ದು, ತಪ್ಪಿದ್ದರೆ ಆ ತಾಯಿ, ನನಗೆ ನನ್ನ ಹೆಂಡತಿ, ಮಕ್ಕಳಿಗೆ ಶಿಕ್ಷೆ ಕೊಡಲಿ. ಸುಳ್ಳು ಅಪಾದನೆ ಮಾಡಿದರೆ ರಕ್ಷಿತ್ ಶಿವರಾಂಗೆ ಅವರ ಪತ್ನಿಗೆ, ಮಕ್ಕಳಿಗೆ, ಅವರ ಕುಟುಂಬಸ್ಥರಿಗೆ ಆ ಮಾರಿಗುಡಿ ತಾಯಿ ಶಿಕ್ಷೆ ಕೊಡಲಿ. ರಕ್ಷಿತ್ ಶಿವರಾಂ ಮಾಡಿರುವ ಅಪಾದನೆಗೆ ಬದ್ಧನಾಗಿದ್ದರೆ, ನಾನು ಮಾಡುವ ಪ್ರಮಾಣದ ಸಮಯ ಬಂದು ಪ್ರಮಾಣ ಮಾಡಲಿ ಎಂದ ಸವಾಲು ಹಾಕಿದ್ದರು.
ಅದರಂತೆ ಇಂದು ಬೆಳಗ್ಗೆ ಬೆಳ್ತಂಗಡಿಯ ಮಾರಿಗುಡಿಯ ದೇವಿಯ ಎದುರು ದೀಪ ಬೆಳಗಿಸಿ, ರಕ್ಷಿತ್ ಶಿವರಾಂ ಮಾಡಿರುವ ಎಲ್ಲಾ ಆರೋಪಗಳನ್ನು ಪ್ರಸ್ತಾಪಿಸಿ, ನಾನು ಯಾರಿಂದಲೂ ಹಣ ಪಡೆದಿಲ್ಲ, ಯಾವುದೇ ಕಾಮಗಾರಿಯಲ್ಲಿ ಯಾರಿಂದಲೂ ಒಂದು ರೂಪಾಯಿಯನ್ನು ಪಡೆದುಕೊಂಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಬಿಮಲ್ ಕಂಪೆನಿಯಲ್ಲಿ ನನ್ನ ಪಾಲುದಾರಿಕೆ, ಹೂಡಿಕೆ ಇಲ್ಲ ಎಂದು ಮಾರಿಗುಡಿ ಮಾತೆಯ ಎದುರು ಪ್ರಮಾಣ ಮಾಡಿದರು. ಬಳಿಕ ಮಾರಿಗುಡಿಯ ಎದುರು ಹತ್ತು ತೆಂಗಿನ ಕಾಯಿ ಒಡೆದು ಸುಳ್ಳು ಆರೋಪ ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್,ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,ಜಯಾನಂದ ಗೌಡ ಪ್ರಜ್ವಲ್,ಪಟ್ಟಣ ಪಂಚಾಯತ್ ಸದಸ್ಯ ಶರತ್ ಶೆಟ್ಟಿ, ಲಾಯಿಲ ಗ್ರಾ.ಪಂ ಸದಸ್ಯ ಗಣೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಗೌಡ ನಾವೂರು, ಜಿಲ್ಲಾ ಸಾಮಾಜಿಕ ಜಾಲತಾಣ ಸದಸ್ಯ ಸುಪ್ರಿತ್ ಜೈನ್, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ಬಿಜೆಪಿ ಪ್ರಮುಖರಾದ ಪ್ರಭಾಕರ ಸವಣಾಲ್,ರಂಜಿತ್ ಶೆಟ್ಟಿ ಮದ್ದಡ್ಕ, ಪ್ರಕಾಶ್ ಆಚಾರ್ಯ, ಚಂದ್ರರಾಜ್ ಮೇಲಂತಬೆಟ್ಟು, ಪ್ರಶಾಂತ್ ಅಂತರ ಜೊತೆಗಿದ್ದರು.

ನಂತರ ಮಾಧ್ಯಮದವರು ಜೊತೆ ಮಾತನಾಡಿ, ಮಲ್ಲೇಶ್ವರನಿಂದ ಬಂದ ವ್ಯಕ್ತಿ ಅನೇಕ ಸುಳ್ಳು ಆರೋಪಗಳನ್ನು ಸಮಾಜದ ಎದುರು ಕಳೆದ ಒಂದು ತಿಂಗಳಿಂದ ಮಾಡುತ್ತಿದ್ದಾರೆ. ನಿನ್ನೆ ಪತ್ರಿಕಾಗೋಷ್ಠಿ ಮಾಡಿ ಅವರ ಆರೋಪಗಳ ಬಗ್ಗೆ ಪ್ರಮಾಣ ಮಾಡುತ್ತೇನೆ ಎಂದು ನಿನ್ನೆ ಹೇಳಿದ್ದೆ. ಇವತ್ತು ಬೆಳಗ್ಗೆ ತಾಲೂಕಿನ ಎಲ್ಲಾ ಶ್ರದ್ದೆಯ ಹಿಂದೂ ಸಮಾಜ ನಂಬುವ ಮಾರಿಗುಡಿಯ ತಾಯಿ ಎದುರು ಪ್ರಮಾಣ ಮಾಡಿದ್ದೇನೆ. ಇವತ್ತು ರಕ್ಷಿತ್ ಶಿವರಾಂರನ್ನು ಕರೆದಿದ್ದೆ. ನೀವು ಮಾಡಿರುವ ಆರೋಪಗಳು, ಅಪಾದನೆಗಳು ನಿಜವಾಗಿದ್ದರೆ ಪ್ರಮಾಣಕ್ಕೆ ಬನ್ನಿ ಎಂದು ಕರೆದಿದ್ದೆ ಅವರು ಬರಲಿಲ್ಲ. ಈ ರೀತಿಯ ಅಪಪ್ರಚಾರ, ಸುಳ್ಳು ಇವತ್ತಿಗೆ ತಾಯಿ ನಿಲ್ಲಿಸಬೇಕು ಎಂದು ನನ್ನ ತಾಯಿಯಲ್ಲಿ ಪ್ರಾರ್ಥನೆ. ಈ ಸಂದರ್ಭದಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿರುವ ಸಂದೇಶ ನೆನಪಾಗುತ್ತದೆ. ‘ಹಗೆಸಾಧಿಸಲು ಸಮಯ ವ್ಯರ್ಥ ಮಾಡಬೇಡಿ, ನಿಮ್ಮನ್ನು ನೋಯಿಸಿದವರು ಕೊನೆಗೆ ಅವರ ಕರ್ಮವನ್ನು ಅವರೇ ಅನುಭವಿಸುತ್ತಾರೆ’ ಎಂಬುದು. ಇವತ್ತಿನ ದಿನ ನಾನು ಮಾಡಿರುವುದಂತದು ನನ್ನ ವಿರುದ್ಧ ಮಾಡಿರುವ ಅಪಪ್ರಚಾರ ಕೊನೆಯಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ. ಇಂತಹ ದುಷ್ಟ ಶಕ್ತಿಗಳು ನಮ್ಮ ತಾಲೂಕಿನಿಂದ ಇರದ ರೀತಿಯಲ್ಲಿ ಆ ತಾಯಿ ಕಾಪಾಡಬೇಕು ಎಂದು ಪ್ರಾರ್ಥಿಸಿದ್ದೇನೆ. ರಕ್ಷಿತ್ ಶಿವರಾಂ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕಾದರೆ ಅವರ ಕುಟುಂಬ ಭ್ರಷ್ಟಾಚಾರ ಮಾಡಿಲ್ಲ ಎಂದು ಮೊದಲು ತಾಯಿಯ ಎದುರು ನಿಂತು ಪ್ರಮಾಣ ಮಾಡಲಿ. ಆ ಮೇಲೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ ಎಂದು ಶಾಸಕರು ಈ ಸಂದರ್ಭ ನುಡಿದರು.


ಡಿ.ಪಿ ಜೈನ್ ಕಾಮಗಾರಿ ಸಮಯದಲ್ಲಿ ಆನೇಕ ಮಂದಿ ಅವರ ಜೊತೆ ಸಬ್ ಕಾಂಟ್ರೆಕ್ಟ್ ಮಾಡಿರುವುದನ್ನು ಅವರ ಬಿಲ್ಲು ಪೆಂಡಿಂಗ್ ಇರುವುದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ನಾನು ಮತ್ತು ಸಂಸದರು ಡಿ.ಪಿ ಜೈನ್ ಕಂಪೆನಿಯ ಜೊತೆ ಮಾತನಾಡಿದ್ದೇವೆ. ಅವರಿಗೆ ಹಣ ಕೊಡಿಸುವ ಬಗ್ಗೆ ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಶಾಸಕರು ಭರವಸೆ ನೀಡಿದರು.

Leave a Comment

error: Content is protected !!