ಉಜಿರೆ : ಕೋಲ್ಕತ್ತಾ ಟ್ರೈನಿ ಡಾಕ್ಟರ್ ಅತ್ಯಾಚಾರವನ್ನು ಖಂಡಿಸಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ ಎಸ್ ಯು ಐ) ಹಾಗೂ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಬೆಳ್ತಂಗಡಿ ಘಟಕದಿಂದ ಆ.17ರಂದು ಉಜಿರೆ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಮುಖಂಡ ತನುಷ್ ಎಂ. ಶೆಟ್ಟಿ ಮಾತನಾಡಿ ಇಂದು ನಮ್ಮ ದೇಶದಲ್ಲಿ ಇಂತಹ ಕಾಮ ಪಿಶಾಚಿಗಳು ಹುಟ್ಟಿಕೊಂಡಿದ್ದಾರೆ ಇಂತಹ ಕಾಮಿಗಳು ತಮ್ಮ ಕಾಮದಾಸೆಗಳನ್ನು ಪೂರೈಸಿಕೊಳ್ಳಲು ಇಂತಹ ವಿದ್ಯಾರ್ಥಿಗಳ ಮೇಲೆ ಲೈಂಗಿಕವಾಗಿ ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡುತ್ತಿದ್ದಾರೆ. ಇಂತಹ ವಿಕೃತ ಕಾಮಿಗಳ ವಿರುದ್ಧ ನಾವು ಪಕ್ಷಭೇದ ಮರೆತು ಹೋರಾಡಬೇಕು. ಇಲ್ಲವಾದರೆ ಇಂದು ಕೊಲ್ಕತ್ತಾದಲ್ಲಿ ನಡೆದ ಘಟನೆಯು ನಾಳೆ ನಮ್ಮ ಮನೆಯಲ್ಲಿ ನಡೆದರು ಅಚ್ಚರಿಯ ವಿಷಯವೇನಲ್ಲ. ಇಂತಹ ಕಾಮುಕರ ವಿರುದ್ಧ ನಾವು ವಿದ್ಯಾರ್ಥಿ ಸಂಘಟನೆಗಳ ಮೂಲಕ ಹೋರಾಡಬೇಕು ಎಂದು ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಕರೆಕೊಟ್ಟರು.
ಎನ್ ಎಸ್ ಯು ಐ ನಾ ವಿದ್ಯಾರ್ಥಿ ನಾಯಕ ಸೆಬಾಸ್ಟಿನ್ ಡಿ’ಸೋಜಾ ಮಾತನಾಡಿ ಇಂತಹ ವಿಕೃತ ಕಾಮಿಗಳನ್ನು ನಾಲಾಯಕ್ ಜನ ಪ್ರತಿನಿಧಿಗಳೇ ಬೆಳೆಸುತ್ತಿದ್ದಾರೆ. ನಾವು ಮೊದಲು ಇಂತಹ ನಾಲಾಯಕ್ ಜನಪ್ರತಿನಿಧಿಗಳ ವಿರುದ್ಧ ಹೋರಾಡಬೇಕು ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವಿನ್ ಟಿ.ಬಿ ಮಾತನಾಡಿ ಅಂದು ಮಹಾತ್ಮ ಗಾಂಧೀಜಿಯವರು ಕಂಡ ಕನಸು ಇನ್ನೂ ನನಸಾಗದೇ ಕನಸಾಗಿಯೇ ಉಳಿದಿದೆ. ಇಂದು ನಾವು ಬೀದಿಗಿಳಿದು ಹೋರಾಟ ಮಾಡದೆ ಇದ್ದರೆ ಮುಂದೆ ಇದೇ ಪರಿಸ್ಥಿತಿ ಮನೆಯ ಮಹಿಳೆಯರಿಗೆ ಬಂದರು ನಾವು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವ ಸಂದರ್ಭ ಎದುರಾಗಬಹುದು ಎಂದು ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಎನ್ ಎಸ್ ಯು ಐ ನ ಜಿಲ್ಲಾ ಉಪಾಧ್ಯಕ್ಷ ಹರ್ಷನ್ ಪೂಜಾರಿ, ಎನ್ ಎಸ್ ಯು ಐ ನ ನಾಯಕ ಪ್ರಿಯಾದರ್ಶನ್ ವಿ.ಎಸ್ ಹಾಗೂ ಎನ್ ಎಸ್ ಯು ಐ ಬೆಳ್ತಂಗಡಿ ತಾಲೂಕು ಘಟಕದ ಉಪಾಧ್ಯಕ್ಷ ಜೋಶಿಲ್ ಆಂಟೋನಿ ಫೆರ್ನಾಂಡಿಸ್ ಹಾಗೂ ಸಂಘಟನೆಯ ಮುಖಂಡರಾದ ಭರತ್, ಕೀರ್ತನ್ ಶೆಟ್ಟಿ, ಮಾನಸ್ ಹಾಗೂ ಇನ್ನಿತರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.