ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಕಚ್ಚಾವಸ್ತು ಪೂರೈಕೆದಾರರಿಂದ ನಾಗಪುರದಲ್ಲಿ ಪ್ರತಿಭಟನೆ – ರೂ.11.50 ಕೋಟಿ ಪಾವತಿಗೆ ಕಂಪೆನಿ ಒಪ್ಪಿಗೆ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73 ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ಸುಮಾರು 35 ಕಿ.ಮೀ. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಪ್ರಧಾನ ಗುತ್ತಿಗೆ ವಹಿಸಿಕೊಂಡ ನಾಗ್ಪುರದ ಖಾಸಗಿ ಕಂಪನಿ ಸ್ಥಳೀಯ ಕಚ್ಚಾವಸ್ತು ಪೂರೈಕೆ ದಾರರು ಸೇರಿದಂತೆ ಇತರರಿಗೆ ಸುಮಾರು 11.50 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿದ್ದು ನಾಗ್ಪುರದಲ್ಲಿ ನಡೆಯುತ್ತಿದ್ದ ಹೋರಾಟವನ್ನು ಹಿಂತೆಗೆದು
ಕೊಳ್ಳಲಾಗಿದೆ.

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಜಾಲಕಟ್ಟೆ- ಚಾರ್ಮಾಡಿ ರಸ್ತೆ ವಿಸ್ತರಣೆಗೆ 385 ಕೋಟಿ ರೂ. ಅನುದಾನ ಮಂಜೂರಾಗಿದೆ. 2023ರ ಡಿಸೆಂಬರ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಆದರೆ ಕಾರ್ಮಿಕರಿಗೆ ಸಂಬಳ ನೀಡದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಇದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ನಾಗ್ಪುರದ ಕಂಪನಿ ಬೆಳ್ತಂಗಡಿ ಸುತ್ತಮುತ್ತ ನಾನಾ ಸಂಸ್ಥೆಗಳಿಂದ ಮರಳು ಜಲ್ಲಿ ಕಲ್ಲು, ದಿನಸಿ ಉತ್ಪನ್ನ, ಪೆಟ್ರೋಲ್ ಹಾಗೂ ಡೀಸೆಲ್, ಮುದ್ರಣ, ಫರ್ನಿಚರ್ ಸೇರಿದಂತೆ ನಾನಾ ವಸ್ತುಗಳನ್ನು ಖರೀದಿಸಿದ್ದರು. ಸುಮಾರು 384 ಕೋಟಿ ರೂ. ಅನುದಾನದ ಕಾಮಗಾರಿ ಇದಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಈವರೆಗಿನ ಕಾಮಗಾರಿಗೆ ಸುಮಾರು 102 ಕೋಟಿ ರೂ. ಪಾವತಿ ಮಾಡಲಾಗಿತ್ತು. ಆದರೆ ಕಂಪನಿ ಮಾತ್ರ ಸ್ಥಳೀಯ ಕಚ್ಚಾವಸ್ತು ಪೂರೈಕೆ ದಾರರು ಸೇರಿದಂತೆ ಯಾರಿಗೂ ಹಣ ಪಾವತಿಸದೆ ಸತಾಯಿಸಿತ್ತು.

ಗುತ್ತಿಗೆ ವಹಿಸಿಕೊಂಡ ಕಂಪನಿ ವಿರುದ್ಧ ರಾಜ್ಯ ಕ್ರಷ‌ರ್ ಮಾಲೀಕರ ಸಂಘದ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ನೇತೃತ್ವದಲ್ಲಿ 45ಕ್ಕೂ ಅಧಿಕ ಮಂದಿ ನಾಗ್ಪುರಕ್ಕೆ ತೆರಳಿ ಕಂಪನಿ ಕಚೇರಿ ಎದುರು ಆ.26 ರಿಂದ ಪ್ರತಿಭಟನೆ ಆರಂಭಿಸಿದ್ದರು. ಇದು ನಾಗ್ಪುರದಲ್ಲಿ ಬಾರಿ ಸಂಚಲನಕೆ ಕಾರಣವಾಗಿತ್ತು. ಪ್ರತಿಭಟನೆಗೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಹೋರಾಟಗಾರರು ಬಂದಿದ್ದರು. ಆ.26 ರಂದು ಬೆಳಗ್ಗೆ ಕಂಪನಿ ಸಿಬ್ಬಂದಿ ನಾನಾ ನೆಪ ಹೇಳಿ ಹೋರಾಟಗಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು. ಆದರೆ ಪಟ್ಟು ಬಿಡದ ಹೋರಾಟಗಾರರು ನಮಗೆ ಹಣ ಪಾವತಿಯಾಗದೆ ಸ್ಥಳದಿಂದ ಕದಲುವುದಿಲ್ಲ ಎಂದು ಹಠಕ್ಕೆ ಬಿದ್ದು, ಧರಣಿ ಕುಳಿತರು.

ವಿಷಯ ತಿಳಿಯುತ್ತಿದ್ದಂತೆ ನಾಗ್ಪುರದ ಶಾಸಕರಾದ ಮೋಹನ್ ಮತೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜೊತೆಗೆ ಮಾತನಾಡಿದರೂ ಇದು ಕೈಗೂಡದಿದ್ದಾಗ ಕರ್ನಾಟಕದ ಬಿಜೆಪಿ ಶಾಸಕರ ಸಂಪರ್ಕ ಸಾಧಿಸಿದ ಮೋಹನ್ ಮತೆ ವಾಸ್ತವ ತೆರೆದಿಟ್ಟು 15 ದಿನದೊಳಗೆ ಕಂಪನಿ ಹಣ ಪಾವತಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಕಂಪನಿ ಸಹಮತ ವ್ಯಕ್ತಪಡಿಸಿ ಆ.29ರಂದು ಶೇ.50 ಹಾಗೂ ಸೆ.4ರೊಳಗೆ ಉಳಿದ ಶೇ.50ನ್ನು ಪಾವತಿಸುವುದಾಗಿ ಭರವಸೆ ನೀಡಿದೆ.
ಶಾಸಕರ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕಂಪನಿ ಭರವಸೆ ನೀಡಿದ ಕಾರಣ ಧರಣಿ ಹಿಂತೆಗೆದು ಕೊಳ್ಳಲಾಯಿತು. ಪ್ರತಿಭಟನೆಗೆ ತೆರಳಿದವರು ಸಂಪೂರ್ಣ ಹಣ ಪಾವತಿಯಾಗದೆ ನಾವು ಊರಿಗೆ ತೆರಳುವುದಿಲ್ಲ ಎಂದು ನಿರ್ಧರಿಸಿ ನಾಗ್ಪುರದಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು ವರದಿಯಾಗಿದೆ.

Leave a Comment

error: Content is protected !!