April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆಯಲ್ಲಿ ಅಜ್ಜಿ ಅಜ್ಜಂದಿರ ದಿನಾಚರಣೆ

ಮುಂಡಾಜೆ :”ಕುಟುಂಬಗಳು ಚಿಕ್ಕದಾಗುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳು ಮೊಮ್ಮಕ್ಕಳೊಂದಿಗೆ ಅಜ್ಜಿ ಅಜ್ಜಂದಿರನ್ನು ಬೆಸೆಯುವ ಈ ಕಾರ್ಯಕ್ರಮವು ಅತ್ಯಂತ ವಿಶೇಷವಾದದ್ದು” ಎಂದು ಶಾಲೆಯ ಪ್ರಾಚಾರ್ಯರಾದ ಫಾದರ್ ಮ್ಯಾಥಿವ್ ಜೆಜೆ CMI ಇವರು ಬಣ್ಣಿಸಿದರು.

ಕ್ರೈಸ್ಟ್ ಅಕಾಡೆಮಿ ಶಾಲೆ(ICSE) ಮುಂಡಾಜೆ, ಇಲ್ಲಿ ಆಯೋಜಿಸಿದ್ದ ಅಜ್ಜಿ ಅಜ್ಜಂದಿರ ದಿನಾಚರಣೆಯನ್ನು ಕುರಿತು ಅವರು ಮಾತನಾಡಿದರು. “ಪ್ರಸ್ತುತ ದಿನಗಳಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಕಾರಣ ಅಜ್ಜಿ ಅಜ್ಜಂದಿರು ಮೊಮ್ಮಕ್ಕಳೊಂದಿಗೆ ಬೆರೆಯದಿರುವುದು. ಹಿರಿಯರ ಆದರ್ಶ ಮತ್ತು ಮೌಲ್ಯಗಳು ಪ್ರಸ್ತುತ ಪೀಳಿಗೆಗೆ ದಾರಿದೀಪವಾಗಬೇಕಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸ್ಪಂದಿಸಿ ಇಷ್ಟೊಂದು ಹಿರಿಯರು ಭಾಗವಹಿಸಿರುವುದು ಸಂತೋಷ ನೀಡಿದೆ” ಎಂದು ಅವರು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಪ್ರಾಚಾರ್ಯರಾದ ಮ್ಯಾಥಿವ್ ಜೆಜೆ, ಉಪ ಪ್ರಾಚಾರ್ಯರಾದ ಫಾದರ್ ಬಿನು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತ್ಯಂತ ಹಿರಿಯವರಾದ ರುಕ್ಮಿಣಿ ಅಮ್ಮ ಮತ್ತು ಚಾಕೋ ಪಿ. ಡಿ ಇವರು ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅನಂತ ಭಟ್ಟರು ಮಾತನಾಡಿ “ಇದು ನಿಜಕ್ಕೂ ಮಹತ್ವದ ಆಚರಣೆ. ಮಕ್ಕಳಿಗೆ ಅಜ್ಜ ಅಜ್ಜಿಯಂದಿರ ಮಹತ್ವ ತಿಳಿಯಬೇಕಾಗಿದೆ. ಅವರ ಜೀವನ ಉತ್ಸಾಹವನ್ನು ಮಕ್ಕಳು ಕಲಿಯಬೇಕಾಗಿದೆ”. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಕ್ರೈಸ್ಟ್ ಕುಟುಂಬಕ್ಕೆ ಧನ್ಯವಾದಗಳು ತಿಳಿಸಿದರು. ಶಿಕ್ಷಕಿ ಜೆಸ್ಸಿ ಅವರು ಅಜ್ಜಿ ಅಜ್ಜಂದಿರ ದಿನದ ಇತಿಹಾಸ ಮತ್ತು ಪರಂಪರೆಯನ್ನು ವಿವರಿಸಿದರು.

ಅನೇಕ ವರ್ಷಗಳ ಕಾಲ ಕ್ರಿಯಾಶೀಲ ಬದುಕನ್ನು ನಡೆಸಿ ಈಗ ವಿಶ್ರಾಂತಿಯಲ್ಲಿರುವ ಹಿರಿಯರಿಗೆ ಅನೇಕ ಮನೋರಂಜನಾತ್ಮಕ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಮ್ಯೂಸಿಕಲ್ ಚೇರ್, ರೋಲಿಂಗ್ ದ ಬಾಲ್, ಲೈಟಿಂಗ್ ದ ಲ್ಯಾಂಪ್ಸ್, ಸಾರಿ ಡ್ರಾಪಿಂಗ್, ಪಾಸಿಂಗ್ ದ ಬಲೂನ್ಸ್ ಹೀಗೆ ವೈವಿಧ್ಯ ಕ್ರೀಡೆಗಳನ್ನು ಅಜ್ಜಂದಿರು, ಅಜ್ಜಿಯಂದಿರು, ದಂಪತಿಗಳು ಎನ್ನುವ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.

ಅಜ್ಜಿ ಅಜ್ಜಂದಿರ ಪ್ರತಿಭೆಗಳ ಅನಾವರಣಕ್ಕೂ ಕ್ರೈಸ್ಟ್ ಅಕಾಡೆಮಿ ವೇದಿಕೆಯನ್ನು ಕಲ್ಪಿಸಿತ್ತು. ಅನೇಕ ಪ್ರತಿಭಾನ್ವಿತರು ಹಾಡು ಮತ್ತು ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ತಮ್ಮದೇ ಮಕ್ಕಳು ಮತ್ತು ಮೊಮ್ಮಕ್ಕಳ ಎದುರಲ್ಲಿ ಈ ರೀತಿಯ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಮನಸ್ಸಿಗೆ ಹರ್ಷ ನೀಡಿದೆ ಎಂದು ಅನೇಕ ಅಜ್ಜಿ ಅಜ್ಜಂದಿರು ತಮ್ಮ ಮನದಾಳದ ಭಾವನೆಗಳನ್ನು ವ್ಯಕ್ತಪಡಿಸಿದರು. ಅನೇಕ ಮೊಮ್ಮಕ್ಕಳು ತಮ್ಮ ಅಜ್ಜಿ ಮತ್ತು ಅಜ್ಜಂದಿರಿಗೆ “ಚೆನ್ನಾಗಿ ಹಾಡಿ”ಎಂದು ಉರಿದುಂಬಿಸುತ್ತಿದ್ದ ದೃಶ್ಯಗಳಂತೂ ರೋಮಾಂಚನಗೊಳಿಸುತ್ತಿದ್ದವು.


ಪೋಷಕರು ಮತ್ತು ಅಜ್ಜಿ ಅಜ್ಜಂದಿರ ಎದುರಿನಲ್ಲಿ ಎಲ್ಲಾ ತರಗತಿಯ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಎಲ್ಲರ ಮುಖದಲ್ಲೂ ನಗೆ ಮೂಡಿಸಿದರು.


ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯ ಮಾಡಿದರೆ ಸಿಸ್ಟರ್ ಜಿ ಜಿ ಯವರು ಸ್ವಾಗತ ಕೋರಿದರು. ಶಿಕ್ಷಕರಾದ ತಿಪ್ಪೇಸ್ವಾಮಿ. ಎಸ್ ಮತ್ತು ಶ್ರೀಮತಿ ಗಾಯಿತ್ರಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಭವ್ಯ ಅವರು ವಂದಿಸಿದರು. ಶಿಕ್ಷಕರು, ಬೋಧಕೇತರ ಸಿಬ್ಬಂದಿ, ಪೋಷಕರು, ನಾಗರಿಕರು ಭಾಗವಹಿಸಿದ್ದರು.

Related posts

ಇಂದಬೆಟ್ಟು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ

Suddi Udaya

ನಿಡ್ಲೆ ಸರ್ಕಾರಿ ಪ್ರೌಢಶಾಲೆ ವಿಶ್ವ ಯೋಗ ದಿನಾಚರಣೆ

Suddi Udaya

ಬರೆಂಗಾಯ ಕೊಡಂಗೆ ಶ್ರೀ ಭಟಾರಿ ಯಾನೆ ಮಲೆದೇವತೆ ಸಹ ದೈವಗಳಿಗೆ ವರ್ಷಾವಧಿ ನೇಮೋತ್ಸವ ಹಾಗೂ ದೊಂಪದ ಬಲಿ ಉತ್ಸವ

Suddi Udaya

ನಡ: ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ಯಾಮಸುಂದರ ಗೌಡ ಆಯ್ಕೆ

Suddi Udaya

ಪೆರ್ಲ ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಶರತ್ ಕೃಷ್ಣ ಪಡ್ವೆಟ್ನಾಯ ಭೇಟಿ : ಸಕಲ ಸಿದ್ಧತೆಗಳ ವೀಕ್ಷಣೆ

Suddi Udaya
error: Content is protected !!