ಅರಸಿನಮಕ್ಕಿ : ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ (ನಿ.),ಅರಸಿನಮಕ್ಕಿ ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಮತ್ತು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್, ಪುತ್ತೂರು ಮತ್ತು ಇಂಡಿಯನ್ ರೆಡ್ ಕ್ರಾಸ್ ಲೇಡಿಗೋಶನ್ ಆಸ್ಪತ್ರೆ, ಮಂಗಳೂರು ಇವುಗಳ ಸಹಯೋಗದಲ್ಲಿ ಮತ್ತು ಆರೋಗ್ಯಂ ಯೋಜನೆಯಡಿ ಸೇವಾಭಾರತಿ (ರಿ.), ಕನ್ಯಾಡಿ ಇದರ ಸಂಯೋಜನೆಯಲ್ಲಿ ಸೆ. 15ರಂದು ಬೃಹತ್ ರಕ್ತದಾನ ಶಿಬಿರವು ಅರಸಿನಮಕ್ಕಿಯ ಹತ್ಯಡ್ಕ ಸಿ. ಎ. ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ಮಲ್ನಾಡು ವಸ್ತ್ರಲಾಯ ಅರಸಿನಮಕ್ಕಿ ಮಾಲಕ ಧರ್ಣಪ್ಪ ಗೌಡ ಉದ್ಘಾಟಿಸಿ, ರಕ್ತದಾನ ಮಾಡುವುದು ಒಂದು ಮಹತ್ತರವಾದ ಕಾರ್ಯ ಎಲ್ಲರೂ ಅದನ್ನು ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಬದುಕಿಗೆ ಬೆಳಕು ಚೆಲ್ಲಿದಂತಾಗುತ್ತದೆ ಎಂದು ತಿಳಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ನ ಸದಸ್ಯರಾದ ಉದಯಶಂಕರ್ ರವರು ಮಾತನಾಡಿ ರಕ್ತದಾನದ ಮಹತ್ವ ಮತ್ತು ಆದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನ ಮತ್ತು ಆಯೋಜನೆಗೆ ಸಹಕರಿಸುತ್ತಿರುವ ಅರಸಿನಮಕ್ಕಿ – ಶಿಶಿಲ ಶೌರ್ಯ ವಿಪತ್ತು ಘಟಕದವರು ಮಾಡುವ ಉತ್ತಮ ಸಮಾಜಮುಖಿ ಚಟುವಟಿಕೆಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ.), ಅರಸಿನಮಕ್ಕಿ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ಅಧ್ಯಕ್ಷತೆಯಲ್ಲಿ, ಸೇವಾಧಾಮ ಸಂಸ್ಥಾಪಕರಾದ ಕೆ ವಿನಾಯಕ ರಾವ್, ಡಾ. ಹರ್ಷಿತ ಸುವಿನ್ ದುರ್ಗಾ ಕ್ಲಿನಿಕ್ ಅರಸಿನಮಕ್ಕಿ, ರಕ್ತ ನಿಧಿ ವಿಭಾಗದ ಜಿಲ್ಲಾ ಸಂಯೋಜಕರಾದ ಪ್ರವೀಣ್ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ರವಿಚಂದ್ರ ರಾವ್, ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರು ರತ್ನ ಬಿ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನ ಮೆಡಿಕಲ್ ಆಫೀಸರ್ ಡಾ. ಕೆ ಸೀತಾರಾಮ್ ಭಟ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಭಾರತಿ ಸಂಸ್ಥೆಯ ಅನುಸರಣೆ ಮತ್ತು ಹಣಕಾಸು ವ್ಯವಸ್ಥಾಪಕ ಮೋಹನ್ ಎಸ್ ನಿರೂಪಿಸಿ, ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ನಿರ್ದೇಶಕರಾದ ಮುರಳಿಧರ್ ಶೆಟ್ಟಿಗಾರ್ ಕಾರ್ಯಕ್ರಮವನ್ನು ಸ್ವಾಗತಿಸಿ, ಸಂಘದ ಅಧ್ಯಕ್ಷರಾದ ರಾಘವೇಂದ್ರ ನಾಯಕ್ ಧನ್ಯವಾದವಿತ್ತರು. ಈ ಶಿಬಿರದಲ್ಲಿ 7 ಮಂದಿ ಮಹಿಳಾ ರಕ್ತದಾನಿಗಳು ಸಹಿತ ಒಟ್ಟು 106 ಮಂದಿ ರಕ್ತ ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.