ಬೆಳ್ತಂಗಡಿ: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರಾದ ಅನ್ವರ್ ಮಾಣಿಪ್ಪಾಡಿಯವರನ್ನು ಎಸ್.ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಯವರ ನೇತೃತ್ವದ ನಿಯೋಗವು ಸೆ.17ರಂದು ಮಂಗಳೂರಿನ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಅನ್ವರ್ ಮಾಣಿಪ್ಪಾಡಿ ಯವರು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಿದ್ಧ ಪಡಿಸಿದ ವಕ್ಫ್ ಆಸ್ತಿಗಳ ವಿವರ ಮತ್ತು ವಕ್ಫ್ ಆಸ್ತಿಯನ್ನು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡ ಬಗ್ಗೆ ತನ್ನ ವರದಿಯಲ್ಲಿ ಬೆಳಕು ಚೆಲ್ಲಿರುವ ಬಗ್ಗೆ ವಿವರಿಸಿದರು. “ಅನ್ವರ್ ಮಾಣಿಪ್ಪಾಡಿ ವರದಿ” ಎಂದೇ ಹೆಸರು ಪಡೆದ ಈ ವರದಿಯನ್ನು ಸರಕಾರ ಕಳೆದ ಹತ್ತು ವರ್ಷಗಳಿಂದ ಅನುಷ್ಠಾನಕ್ಕೆ ತರದೆ ಇರುವ ಬಗ್ಗೆ ಮಾಣಿಪ್ಪಾಡಿಯವರು ಬೇಸರ ವ್ಯಕ್ತಪಡಿಸುತ್ತಾ, ಈ ವರೆಗಿನ ಸರಕಾರಗಳು ವಕ್ಫ್ ಹಗರಣಗಳ ಬಗ್ಗೆ ಸೂಕ್ತ ತನಿಖೆಯಾಗಲಿ, ಕಾನೂನು ಕ್ರಮಗಳಾಗಲಿ ಕೈಗೊಂಡಿಲ್ಲ. ಇದು ಘೋರ ಅನ್ಯಾಯ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಡೆದಿರುವ ವಕ್ಫ್ ಹಗರಣಗಳ ವಿವರಗಳನ್ನು ನೀಡುತ್ತಾ ನಮ್ಮ ಸಮುದಾಯದ ಆಸ್ತಿಗಳು ಹೇಗೆ ಭ್ರಷ್ಟರ ಪಾಲಾಗುತ್ತಿದೆ ಎನ್ನುವುದನ್ನು ಸಾಕ್ಷ್ಯ ಸಮೇತ ವಿವರಿಸಿದರು.
ವಕ್ಫ್ ತಿದ್ದುಪಡಿ 2024′ ಮಸೂದೆಯ ವಿರುದ್ಧ ಎಸ್. ಡಿ.ಪಿ.ಐ ಪಕ್ಷವು ದೇಶದಾದ್ಯಂತ ನಡೆಸುತ್ತಿರುವ ಪ್ರತಿಭಟನೆಗಳು, ಜನಜಾಗೃತಿಗಳ ಬಗ್ಗೆ ಅನ್ವರ್ ಮಾಣಿಪ್ಪಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ರಾಝ ಉಪಸ್ಥಿತರಿದ್ದರು.