ನಡ: ಚಾರಣಿಗರ ಆಕರ್ಷಣೆಯ ಕೇಂದ್ರ ಗಡಾಯಿಕಲ್ಲುಗೆ ಹೋಗಲು ಹೇರಿದ್ದ ನಿರ್ಬಂಧವನ್ನು ಹಿಂಪಡೆಯಲಾಗಿದ್ದು ಇದೀಗ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿರುವ ಈ ಕೋಟೆಯ ತುದಿ ತಲುಪಬೇಕಾದರೆ ಸುಮಾರು 2,800ಕ್ಕೂ ಅಧಿಕ ಕಡಿದಾದ ಮೆಟ್ಟಿಲುಗಳನ್ನು ಏರಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಗಡಾಯಿಕಲ್ಲನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ.
ಕಳೆದ ಬೇಸಿಗೆಯಿಂದ ಗಡಾಯಿಕಲ್ಲು ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧ ಹೇರಲಾಗಿದ್ದು, ಅದು ಸೆ.20ರವರೆಗೆ ಮುಂದುವರಿದಿತ್ತು ಗಡಾಯಿಕಲ್ಲು ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು ಬೇಸಿಗೆಕಾಲದಲ್ಲಿ ಕಾಡ್ಗಿಚ್ಚಿನ ಭಯ ಇರುವುದರಿಂದ ಹಾಗೂ ಮಳೆಗಾಲದಲ್ಲಿ ಇಲ್ಲಿನ ಜಾರುವ ಬಂಡೆ, ಮೆಟ್ಟಿಲು, ಕಲ್ಲುಗಳಿಂದ ಅಪಾಯ ಉಂಟಾಗಬಾರದು ಎಂಬ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆ ಪ್ರವೇಶ ನಿಷೇಧ ಹೇರಿತ್ತು. ಇತ್ತೀಚೆಗೆ ಜಲಪಾತ ಪ್ರವೇಶಕ್ಕೆ ಅವಕಾಶ ನೀಡಿದ ಸಮಯವೂ ಮುಂಜಾಗ್ರತಾ ಕ್ರಮವಾಗಿ ಗಡಾಯಿಕಲ್ಲು ಪ್ರವೇಶ ನಿಷೇಧ ಮುಂದುವರಿದಿದತ್ತು. ಇದೀಗ ಮಳೆ ಕಡಿಮೆಯಾಗಿ ಬಂಡೆ ಒಣಗಿರುವ ಕಾರಣ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ನೀಡಿರುವ ಅವಕಾಶ ಡಿಸೆಂಬರ್ ತನಕ ಮುಂದುವರಿಯುವ ಸಾಧ್ಯತೆ ಇದೆ. ಗಡಾಯಿಕಲ್ಲಿಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ಏರಲು ಅವಕಾಶ ನೀಡಲಾಗಿದೆ ಗಡಾಯಿಕಲ್ಲಿನಲ್ಲಿ ರಾತ್ರಿ ವಾಸ್ತವ್ಯಕ್ಕೆ ಅವಕಾಶವಿರುವುದಿಲ್ಲ. ಇಲಾಖೆ ನಿಗದಿ ಪಡಿಸಿದ (kuduremukhanationalpark.in) ವೆಬ್‌ಸೈಟ್‌ನಲ್ಲಿ ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ನೋಂದಾಯಿಸದೆ ಬರುವವರಿಗೆ ಅವಕಾಶ ನೀಡಲಾಗುವುದಿಲ್ಲ. ಟಿಕೆಟ್ ದರ ದೊಡ್ಡವರಿಗೆ 50ರೂ., ಮಕ್ಕಳಿಗೆ 25 ರೂ. ಇದೆ.