ಮಡಂತ್ಯಾರು: ಜೆಸಿಐ ಮಡಂತ್ಯಾರು ಸಂಸ್ಥೆಯು ಕಳೆದ 33 ವರ್ಷಗಳಿಂದ ಅದ್ಬುತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದ ಸಂಸ್ಥೆಯಾಗಿದೆ. ಒಂದು ವಾರಗಳ ಕಾಲ ಜೆಸಿ ಸಪ್ತಾಹವನ್ನು ಮಡಂತ್ಯಾರಿನ ಹಬ್ಬವಾಗಿ ಆಚರಿಸಿ ಜೆಸಿಐ ಭಾರತದಲ್ಲಿ ಅದ್ದೂರಿಯ ಜೆಸಿ ಸಪ್ತಾಹಕ್ಕೆ ಮೂರು ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ ಎಂದು ಮಡಂತ್ಯಾರು ಜೆಸಿಐ ಘಟಕದ ಪೂರ್ವಾದ್ಯಕ್ಷ ತುಳಸಿದಾಸ್ ಪೈ ಹೇಳಿದರು.
ಅವರು ಅ. 2ರಂದು ಸುವರ್ಣ ಆರ್ಕೇಡ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಡಂತ್ಯಾರು ಘಟಕಾಧ್ಯಕ್ಷ ವಿಕೇಶ್ ಮಾನ್ಯರವರ ಅಧ್ಯಕ್ಷತೆಯಲ್ಲಿ ಈ ಬಾರಿಯ ವರ್ಣರಂಜಿತ ಜೆಸಿ ಸಪ್ತಾಹ ‘ವಿಜಯ’ ಸರ್ವತ್ರ ವಿಜಯೀ ಪ್ರಾಪ್ತಿ ರಸ್ತು – 2024 ಅ 13 ರಿಂದ 19 ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.
ಸಪ್ತಾಹದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ನೇರವೇರಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ ಮಾಡಲಿದ್ದಾರೆ. ಏಳು ದಿನ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರತಿ ದಿನ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಸ್ಪರ್ದೆಗಳು, ನಾಟಕ, ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವಿಶೇಷವಾಗಿ ವಿವಿಧ ಕ್ಷೇತ್ರದ 15 ಸಾಧಕರಿಗೆ ಜೆಸಿ ಸಾಧನಾ ಪುರಸ್ಕಾರವನ್ನು ನೀಡಿ ಗೌರವಿಸಲಾಗುತ್ತಿದ್ದು, ಸಪ್ತಾಹದ ಸಮಾರೋಪದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಮಡಂತ್ಯಾರು ಅಧ್ಯಕ್ಷ ವಿಕೇಶ್ ಮಾನ್ಯ, ನಿಕಟಪೂರ್ವಾಧ್ಯಕ್ಷ ಅಶೋಕ್ ಗುಂಡಿಯಲ್ಕೆ, ಕಾರ್ಯದರ್ಶಿ ಸಂಯುಕ್ತ್ ಪೂಜಾರಿ, ಸಪ್ತಾಹ ಸಂಯೋಜಕ ಯತೀಶ್ ರೈ,ಸಹ ಸಂಯೋಜಕ ಮನೋಜ್ ಮಾಯಿಲೋಡಿ ಉಪಸ್ಥಿತರಿದ್ದರು.