ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರವನ್ನು ಅ.3 ಹಾಗೂ ಅ.4 ರಂದು ಹಮ್ಮಿಕೊಂಡಿದ್ದು, ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ಭವಾನಿ ಶಂಕರ್ ನೆರವೇರಿಸಿದರು.
“ವಿದ್ಯಾರ್ಥಿನಿಲಯದ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡು ಇಲಾಖೆ ನೀಡುವ ಪ್ರೋತ್ಸಾಹ ಧನದ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಾ ಕೇಸರಿ ಇವರು “ವಿದ್ಯಾರ್ಥಿಗಳು ಶಾಲಾ ಶಿಕ್ಷಕರ ಮಾರ್ಗದರ್ಶನದ ಮೂಲಕ ಸಮಯವನ್ನು ಸದುಪಯೋಗ ಪಡಿಸಿಕೊಂಡು, ಉತ್ತಮ ಫಲಿತಾಂಶ ಪಡೆಯಲು ಕಥೆಯ ಮೂಲಕ ಪ್ರೇರೇಪಿಸಿದರು”.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಹೇಮಚಂದ್ರ ಇವರು ವಹಿಸಿದ್ದರು. ತಾಲೂಕಿನ 6 ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ 93 ವಿದ್ಯಾರ್ಥಿಗಳು ಹಾಗೂ ನಿಲಯ ಮೇಲ್ವಿಚಾರಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ವಾರ್ಡನ್ ಹೇಮಲತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಾರ್ಡನ್ ಡಾ. ಅರ್ಷಿಯ ವಂದಿಸಿದರು.