ಪುಂಜಾಲಕಟ್ಟೆ-ಚಾರ್ಮಾಡಿ ಭರದಿಂದ ಸಾಗುತ್ತಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿ

Suddi Udaya

ಬೆಳ್ತಂಗಡಿ: ಮಳೆ ದೂರವಾಗುತ್ತಿದ್ದಂತೆ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಅಭಿವೃದ್ಧಿಯ ಕಾಮಗಾರಿಗೆ ಮತ್ತೆ ವೇಗ ದೊರಕಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ಮತ್ತೆ ಕಾಮಗಾರಿ ಆರಂಭವಾಗಿದೆ. ಮಳೆ ಇರುವ ಸಮಯ ಚರಂಡಿ ದುರಸ್ತಿ, ರಸ್ತೆ ಹೊಂಡ ಮುಚ್ಚುವುದು, ಕೆಸರು ತೆರವುಗೊಳಿಸುವುದು ಚರಂಡಿ ಸ್ವಚ್ಛತೆ, ರಸ್ತೆಗೆ ಚರಲ್ ಹಾಕುವ ಕೆಲಸಗಳು ನಡೆದಿದೆ.


ಹಾಲಿ ರಸ್ತೆಯನ್ನು ಸಮತಟ್ಟುಗೊಳಿಸುವ, ಡಾಂಬರೀಕರಣ ನಡೆಸುವ, ಚರಂಡಿಗಳ ನಿರ್ಮಾಣ, ಜಲ್ಲಿ ಹಾಕುವ ಕಾಮಗಾರಿಗಳು ನಡೆಯುತ್ತಿವೆ. ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಯ ಬೃಹತ್ ಅನುದಾನದ ಯೋಜನೆಯನ್ನು ಮೊದಲಿಗೆ ನಾಗಪುರ ಡಿಪಿ ಜೈನ್ ಕಂಪನಿ ವಹಿಸಿಕೊಂಡಿತ್ತು. ಈ ಸಮಯ ಬೇಕಾಬಿಟ್ಟಿ ಕಾಮಗಾರಿ ನಿರ್ವಹಿಸಿದ ಕಂಪನಿ ವಾಹನ ಸಂಚಾರಕ್ಕೆ ಸಾಕಷ್ಟು ಅಡ್ಡಿ ಉಂಟು ಮಾಡಿತ್ತು. ಮಳೆಗಾಲದಲ್ಲಿ ಮದ್ದಡ್ಕ, ಕಾಶಿಬೆಟ್ಟು, ಉಜಿರೆ, ಸೋಮಂತಡ್ಕ ಮೊದಲಾದ ಕಡೆ ವಾಹನ ಸಂಚಾರ ನಡೆಸುವುದಕ್ಕೆ ಭಾರಿ ತೊಂದರೆ ಉಂಟಾಗಿತ್ತು.


ಬಳಿಕ ಕಂಪನಿ ನಾನಾ ಕಾರಣಗಳಿಂದ ಕೆಲಸ ಮುಂದುವರಿಸಲಾರದೆ ಮುಗ್ರೋಡಿ ಕನ್ಸ್ಟ್ರಕ್ಷನ್‌ಗೆ ಒಳಗುತ್ತಿಗೆ ಮೂಲಕ ಕಾಮಗಾರಿ ನಿರ್ವಹಿಸುವ ಒಪ್ಪಂದ ಮಾಡಿಕೊಂಡಿತ್ತು.ಕಂಪನಿ ಬದಲಾಗುತ್ತಿದ್ದಂತೆ ಕಾಮಗಾರಿಗೆ ಚುರುಕು ಮುಟ್ಟಿತು. ಮಳೆ ಸಮಯದಲ್ಲಿ ಕಂಪನಿ ವಾಹನ ಸಂಚಾರಕ್ಕೆ ರಸ್ತೆಯನ್ನು ಯೋಗ್ಯವಾಗಿ ಮಾಡಿಕೊಡುವಲ್ಲಿ ಸಾಕಷ್ಟ್ಟು ಶ್ರಮ ವಹಿಸಿತ್ತು.


ಮುಂಡಾಜೆಯ ಸೀಟು ವ್ಯಾಪ್ತಿಯಲ್ಲಿ ಅಗೆದು ಹಾಕಲಾದ ರಸ್ತೆಗೆ ಈಗ ಡಾಂಬರೀಕರಣ ನಡೆಸುವ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಉಜಿರೆಯಲ್ಲಿ ಚರಂಡಿಗಳನ್ನು ನಿರ್ಮಿಸುವ, ಮದ್ದಡ್ಕ, ಹಳೆಕೋಟೆಯಲ್ಲಿ ರಸ್ತೆ ಅಗಲೀಕರಣ, ಮುಂಡಾಜೆ ಬೆಳ್ತಂಗಡಿಯಲ್ಲಿ ಸೇತುವೆ ನಿರ್ಮಾಣದ ಕಾಮಗಾರಿಗಳು ನಡೆಯುತ್ತಿವೆ.

Leave a Comment

error: Content is protected !!