ಬೆಳ್ತಂಗಡಿ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಆದಿವಾಸಿ ಮಲೆಕುಡಿಯ ಸಮುದಾಯ ವಿದ್ಯುತ್, ರಸ್ತೆ ಸೇರಿದಂತೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಸಂವಿಧಾನಬದ್ಧ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು , ಆದಿವಾಸಿ ಸಮುದಾಯಗಳಾದ ಮಲೆಕುಡಿಯ, ಕೊರಗ , ಮರಾಠಿ ನಾಯ್ಕ ಕಾಲೋನಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಬಾಂಜಾರು ಮಲೆಕುಡಿಯ ಕಾಲನಿಯ ಜಮೀನಿನ ಮೇಲೆ ರಾಜ್ಯ ಸರ್ಕಾರ ಹಾಕಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರದ ಗಮನ ಸೆಳೆಯಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ವಿಧಾನ ಪರಿಷತ್ ಶಾಸಕ ಬಿ.ಕೆ ಹರಿಪ್ರಸಾದ್ ಅವರಿಗೆ ಡಿ.1 ರಂದು ಬೆಳ್ತಂಗಡಿಯಲ್ಲಿ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ನಿರಾಕರಿಸುವುದು ಮಾನವ ಹಕ್ಕುಗಳ ಉಲ್ಲಂಘನೆ. ಜೊತೆಗೆ ತಾಲೂಕಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿಗಳನ್ನು ಖಾಯಂ ಮಾಡಬೇಕು ಮತ್ತು ಆಶ್ರಮ ಶಾಲೆಗಳನ್ನು ಪ್ರೌಢಶಾಲೆ ತನಕ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು , ಆದಿವಾಸಿಗಳು ವಾಸಿಸುವ ಎಲ್ಲಾ ಕಂಪನಿಗಳಿಗೆ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು , ಮಹತ್ವಾಕಾಂಕ್ಷೆಯ ಕಾಯ್ದೆಯಾದ ಅರಣ್ಯ ಹಕ್ಕು ಕಾಯ್ದೆಯನ್ನು ಸರಳೀಕೃತಗೊಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು , ಪೌಷ್ಟಿಕಾಹಾರವನ್ನು ಎಲ್ಲಾ ಆದಿವಾಸಿಗಳಿಗೆ ವಿತರಣೆ ಮಾಡಬೇಕು , ಬಾಂಜಾರು ಮಲೆಕುಡಿಯ ಕಾಲನಿಯ ಜಮೀನಿನ ಮೇಲೆ ಸರ್ಕಾರ ಹೂಡಿರುವ ಕೇಸ್ ವಾಪಸ್ ಪಡೆಯಬೇಕು ಮತ್ತು ನೆರಿಯ ಗ್ರಾಮದ ಅಣಿಯೂರು , ಕಾಟಾಜೆ , ಪರ್ಪಳ ಮೂಲಕ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕು , ಆದಿವಾಸಿಗಳಿಗೆ ಜಿಲ್ಲಾ ಕೇಂದ್ರದಲ್ಲಿ ಪ್ರತ್ಯೇಕ ವಸತಿ ನಿಲಯ ನಿರ್ಮಾಣ ಸೇರಿದಂತೆ ಹಲವಾರು ವಿಚಾರಗಳನ್ನು ಶಾಸಕ ಬಿ.ಕೆ ಹರಿಪ್ರಸಾದ್ ಅವರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ನಾನು ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ಈಗಾಗಲೇ ನಮ್ಮ ರಾಜ್ಯ ಸರ್ಕಾರ ಒಂದು ಹಂತದ ಸಭೆಯನ್ನು ನಡೆಸಿ ಆದಿವಾಸಿಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಈ ಬಗ್ಗೆ ನಾನು ನಿರಂತರವಾಗಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ , ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ , ಉಪಾಧ್ಯಕ್ಷೆ ಪುಷ್ಪ ಕಾಟಾಜೆ ನೆರಿಯ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ , ಯುವ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಪೆರ್ನಾಂಡೀಸ್ ಹಳ್ಳಿಮನೆ , ನವೀನ್ ಗೌಡ ಸವಣಾಲು ಉಪಸ್ಥಿತರಿದ್ದರು.