ಬೆಳ್ತಂಗಡಿ: ರೀಚಿಂಗ್ ದಿ ಅನ್ರಿಚ್”, ತಲುಪಲು ಅಸಾಧ್ಯವಾದವರನ್ನು ತಲುಪುವುದು ಎಂಬ ಧ್ಯೇಯದೊಂದಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಆಧುನಿಕ ಆರೋಗ್ಯ ಸೇವೆ ಒದಗಿಸುವ ಕನಸಿನೊಂದಿಗೆ 1999ರಲ್ಲಿ ಕಕ್ಕಿಂಜೆಯಲ್ಲಿ ಸಣ್ಣ ವೈದ್ಯಕೀಯ ಚಿಕಿತ್ಸಾಲಯ ಆರಂಭಿಸುವ ಮೂಲಕ (ಕ್ಲಿನಿಕ್) ಆರಂಭವಾದ ವೈದ್ಯಕೀಯ ಸೇವಾ ಪಯಣದಲ್ಲಿ ನಾವು ಈಗ ಹೊಸದೊಂದು ಮೈಲಿಗಲ್ಲನ್ನು ತಲುಪುತ್ತಿದ್ದೇವೆ. ಡಿ. 7 ರಂದು ಬೆಳಗ್ಗೆ 10.30ಕ್ಕೆ ನಮ್ಮ ಆಸ್ಪತ್ರೆಯಲ್ಲಿ ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ಸಹಯೋಗದಲ್ಲಿ ಆರಂಭಿಸಲಾಗಿರುವ ನೂತನ ತುರ್ತು ಚಿಕಿತ್ಸಾ ವೈದ್ಯಕೀಯ ಕೇಂದ್ರದ ಉದ್ಘಾಟನೆಯಾಗಲಿದೆ. ಬೆಂಗಳೂರಿನ ಅದಮ್ಯ ಚೇತನ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟೀ ಡಾ.ತೇಜಸ್ವಿನಿ ಅನಂತಕುಮಾರ್ ಈ ಹೊಸ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ ಎಂದು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಹೇಳಿದರು.
ಅವರು ಡಿ.3 ರಂದು ಬೆಳ್ತಂಗಡಿ ಸುವರ್ಣ ಆರ್ಕೇಡ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಪಶ್ಚಿಮ ಘಟ್ಟ ತಪ್ಪಲಿನ ಹಾಗೂ ಮೇಲಿನ ಭಾಗದ ಜನರಿಗೆ ಇಂದಿಗೂ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಸಲಹೆ – ಚಿಕಿತ್ಸೆ ಪಡೆಯುವುದು ದುಸ್ತರದ ಸಂಗತಿಯಾಗಿಯೇ ಉಳಿದಿದೆ. ಈ ಭಾಗದ ಕಡಿದಾದ, ಕಚ್ಚಾ ರಸ್ತೆಗಳಲ್ಲಿ ವಾಹನ ಅಪಘಾತಗಳು, ಕೃಷಿ ಕೆಲಸದ ಸಂದರ್ಭಗಳಲ್ಲಿ ಎದುರಾಗುವ ಅನಾಹುತಗಳು, ವನ್ಯ ಜೀವಿ ದಾಳಿ, ಆತ್ಮಹತ್ಯೆ ಪ್ರಯತ್ನ ಹೀಗೆ ವೈದ್ಯಕೀಯ ತುರ್ತು ಪರಿಸ್ಥಿತಿಗಳು ಸದಾ ನಿರ್ಮಾಣವಾಗುತ್ತಲೇ ಇರುತ್ತದೆ. ಕೆಲವು ಕಡೆ ಗುಡ್ಡಗಾಡು ಪ್ರದೇಶಗಳಲ್ಲಿ ನಡೆಯಲು ಸಾಧ್ಯವಿಲ್ಲದ ಅಶಕ್ತರಿಗೆ, ಆಸ್ಪತ್ರೆಗೆ ಬರಲು ಸಾಧ್ಯವಿಲ್ಲದ ರೋಗಿಗಳಿಗೆ ನಮ್ಮ ಶ್ರೀ ಕೃಷ್ಣ ಯೋಗಕ್ಷೇಮ ಅಂಬುಲೆನ್ಸ್ ಮೂಲಕ ವೈದ್ಯಕೀಯ ಸಿಬ್ಬಂದಿಗಳು (ಓರ್ವ ವೈದ್ಯರು, ನರ್ಸಿಂಗ್ ಸ್ಪಾಫ್,ಲ್ಯಾಬ್ ಟೆಕ್ನಿಷಿಯನ್) ಮನೆಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಿದ್ದೇವೆ, ಇನ್ನು ಚಾರ್ಮಾಡಿ ಘಾಟ್ ರಸ್ತೆ ಒಳಗೊಂಡ ಮಂಗಳೂರು – ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಈಗ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅಧುನಿಕ ಸಾರಿಗೆ, ಸಂಪರ್ಕ ಮತ್ತಿತರ ವ್ಯವಸ್ಥೆಗಳು ಅಲಭ್ಯವಾಗಿದ್ದ ಎರಡು ದಶಕಗಳ ಹಿಂದೆ ನೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ತಾಲೂಕಿನ ವಿವಿದೆಡೆ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನಾವು ನೋಡಿದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಹಾಗೂ ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಎದುರಾಗುತ್ತಿರುವ ವೈದ್ಯಕೀಯ ತುರ್ತುಸ್ಥಿತಿಗಳನ್ನು ಸಮರ್ಥವಾಗಿ ಎದುರಿಸಲು, ನಮ್ಮೂರಿನ ಜನರಿಗೆ ತುರ್ತು ಅನಾಹುತ ಸಂದರ್ಭಗಳಲ್ಲಿ ಅತಿ ಶೀಘ್ರವಾಗಿ ಸ್ಪಂದಿಸಲು ಸಾಧ್ಯವಾಗುವಂತೆ ಇದೀಗ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಈ ಹೊಸ “ತುರ್ತು ಚಿಕಿತ್ಸಾ ವಿಭಾಗ’ವನ್ನು ಆರಂಭಿಸುತ್ತಿದ್ದೇವೆ ಎಂದರು.
ಶ್ರೀಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ವಂದನಾ ಎಂ ಇರ್ವತ್ರಾಯ ಇವರು ಮಾತನಾಡಿ ಶ್ರೀ ಕೃಷ್ಣ ಆಸ್ಪತ್ರೆ ದಶಕಗಳಿಂದ ತುರ್ತು ಸಂದರ್ಭಗಳಲ್ಲಿ ರೋಗಿಗಳ ಪಾಲಿಗೆ ಸಂಜೀವಿನಿ ಇದ್ದಂತೆ ಸೇವೆ ಸಲ್ಲಿಸುತ್ತಿದೆ. ಆದರೆ ಈವರೆಗೆ ನಾವು ತೀವ್ರ ತೆರನಾದ ಅಪಘಾತದ ಸಂದರ್ಭಗಳಲ್ಲಿ ರೋಗಿಗಳಿಗೆ ಅಗತ್ಯ ವೈದ್ಯಕೀಯ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಸರಿಸುಮಾರು 70 ಕಿ.ಮೀ ದೂರದ ಮಂಗಳೂರಿನ ಅಸ್ಪತ್ರೆಗಳಿಗೆ ರವಾನಿಸಬೇಕಾಗಿತ್ತು,ಆದರೆ ಈ ಹೊಸ ವಿಭಾಗದ ಮೂಲಕ, ನಮಗೆ ನಮ್ಮ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಾಗುತ್ತಿದೆ. ಜೊತೆಗೆ ರೋಗಿಗಗಳನ್ನು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತ್ವರಿತವಾಗಿ ನಮ್ಮ ಶ್ರೀ ಕೃಷ್ಣ ಯೋಗಕ್ಷೇಮ ಅಂಬುಲೆನ್ಸ್ (ALS ICU Ambulance) ಮೂಲಕ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿ, ಅವರಿಗೆ ಯಾವುದೇ ವಿಳಂಬವಿಲ್ಲದೆ ಚಿಕಿತ್ಸೆ ದೊರಕುವಂತೆ ಮಾಡಲು ಸಾಧ್ಯವಾಗಲಿದೆ. ನಮ್ಮ ಉದ್ದೇಶ ಗ್ರಾಮೀಣ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆ ಒದಗಿಸುವುದು, ಮತ್ತು ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು,ಇದರ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.
ಸಮಾಜ ಸೇವೆಯ ಮೂಲಕವೇ ನಮಗೆಲ್ಲಾ ಆದರ್ಶವಾಗಿರುವವರು ಡಾ. ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ನೂತನ ತುರ್ತು ಚಿಕಿತ್ಸಾ ವ್ಯದ್ಯಕೀಯ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ವಿಧಾನ ಪರಿಷತ್ ನ ಉಪ ಸಭಾಪತಿ ಎಂ ಕೆ ಪ್ರಾಣೇಶ್ ವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ ಹರೀಶ್ ಕುಮಾರ್, ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ರೀಜನಲ್ ಚೀಫ್ ಆಪರೇಟಿಂಗ್ ಆಫೀಸರ್ ಸಗೀರ್ ಸಿದ್ದಿಕಿ, ಕೆಎಂಸಿ ಆಸ್ಪತ್ರೆ ಮಂಗಳೂರು ಇಲ್ಲಿನ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಜೀಧು ರಾಧಾಕೃಷ್ಣನ್, ಎಸ್ ಕೆ ಆರ್ ಡಿ ಪಿ ಧರ್ಮಸ್ಥಳ ವಿಮಾ ವಿಭಾಗ, ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶಾರದಾ, ಹಾಗೂ ಸೈಂಟ್ ಥಾಮಸ್ ಪ್ರೌಢ ಶಾಲೆ, ನೆರಿಯ ಇಲ್ಲಿನ ಮುಖ್ಯ ಶಿಕ್ಷಕಿ ಶ್ರೀಸಿಯಾ ಕೆಪಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇಲ್ಲಿನ ಎಮರ್ಜೆನ್ಸಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಜೀಧು ರಾಧಾಕೃಷ್ಣನ್, ಕೆಎಂಸಿ ಜನಸಂಪರ್ಕಧಿಕಾರಿ ರಾಕೇಶ್ ಉಪಸ್ಥಿತರಿದ್ದರು.