ಫೋಟೋ: ಧರ್ಮಸ್ಥಳದಲ್ಲಿ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಎಸ್.ಎಂ. ಕೃಷ್ಣ ಮತ್ತು ಪತ್ನಿ ಪ್ರೇಮಾಕೃಷ್ಣ ಭೇಟಿ ನೀಡಿದಾಗ, ಡಿ. ವೀರೇಂದ್ರ ಹೆಗ್ಗಡೆಯವರು ಮಾಹಿತಿ ನೀಡುತ್ತಿರುವುದು.
ಧರ್ಮಸ್ಥಳ: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು. ಮಹಾಮೇಧಾವಿಯಾಗಿದ್ದ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಪ್ರಗತಿಪರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು.
ಫೋಟೋ: ಎಸ್.ಎಂ. ಕೃಷ್ಣ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಮಾತುಕತೆ ನಡೆಸುತ್ತಿರುವುದು.
ದಕ್ಷ ಆಡಳಿದಾರರಾಗಿದ್ದ ಅವರು ಶಿಸ್ತಿನ ಸಿಪಾಯಿಯಾಗಿ, ಉತ್ತಮ ವಾಗ್ಮಿಯಾಗಿ, ಮತ್ತು ಹಿರಿಯ ರಾಜಕೀಯ ಮುತ್ಸದ್ಧಿಯಾಗಿ ಚಿರಪರಿಚಿತರಾಗಿದ್ದರು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ, ಕೇಂದ್ರಸರ್ಕಾರದ ವಿದೇಶಾಂಗ ಸಚಿವರಾಗಿ ಅಪಾರ ಅನುಭವ ಮತ್ತು ಪರಿಣತಿ ಹೊಂದಿದ್ದರು.
ಧರ್ಮಸ್ಥಳದ ಅಭಿಮಾನಿಯೂ, ಭಕ್ತರೂ ಆಗಿದ್ದ ಅವರು ನಮ್ಮ ಕ್ಷೇತ್ರದ ಅನೇಕ ಸಮಾರಂಭಗಳಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ್ದಾರೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಅವರ ಅಗಲುವಿಕೆಯಿಂದ ಕುಟುಂಬದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದರು.