21.2 C
ಪುತ್ತೂರು, ಬೆಳ್ತಂಗಡಿ
December 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅ ಭಾ ಸಾ ಪ ಬೆಳ್ತಂಗಡಿ ತಾ| ಸಮಿತಿ ಪ್ರಥಮ ಅಧಿವೇಶನ “ತೆಂಕಣದಲ್ಲಿ ನುಡಿದಿಬ್ಬಣ “

ಉಜಿರೆ:  ಸಾಹಿತ್ಯಕ್ಕೆ ಮನುಕುಲವನ್ನು ಒಂದುಗೂಡಿಸುವ  ಶಕ್ತಿ ಇದೆ .ವಚನ, ದಾಸ ಸಾಹಿತ್ಯದಲ್ಲಿ  ಆಧ್ಯಾತ್ಮಿಕತೆ, ರಾಷ್ಟ್ರ ಭಕ್ತಿ ,ದೇಶಭಕ್ತಿ ಮೂಡಿಸುವ ಸಂಸ್ಕೃತಿ,ಸಂಸ್ಕಾರವನ್ನು  ಬಿಂಬಿಸುವ  ಸಾಹಿತ್ಯ ಬರಬೇಕಾಗಿದೆ .ಮಲೆನಾಡು, ಕರಾವಳಿ,ಪ್ರಕೃತಿಯ ಮೂಲವಸ್ತು  ಕವಿ,ಸಾಹಿತಿಗಳ ಕಾವ್ಯವಸ್ತುಗಳಾಗಬೇಕು  ಎಂದು ಲೋಕಾಯುಕ್ತ ನಿವೃತ್ತ ಎಸ್.ಪಿ. ಕುಮಾರಸ್ವಾಮಿ  ಹೇಳಿದರು.

ಅವರು ಡಿ 22 ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಇದರ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ  ನಡ ಗ್ರಾಮದ  ಕುತ್ರೊಟ್ಟು ಬಲಿಪ ರೆಸಾರ್ಟ‌್‌ನ ಪ್ರಕೃತಿಯ ಮಡಿಲಲ್ಲಿ  ನಡೆದ “ತೆಂಕಣದಲ್ಲಿ ನುಡಿದಿಬ್ಬಣ” ತಾಲೂಕು ಪ್ರಥಮ  ಅಧಿವೇಶನವನ್ನು  ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರಭಕ್ತಿ ಎಂದರೆ ಕೇವಲ ಮಿಲಿಟರಿ ಸೇವೆ ಮಾತ್ರ ಎಂದು ಭಾವಿಸಬೇಕಾಗಿಲ್ಲ‌. ಸಾಹಿತ್ಯದ ಮೂಲಕವೂ ದೇಶಸೇವೆ ಮಾಡಬಹುದು. ದ.ಕ.ದಲ್ಲಿ ಯಕ್ಷಗಾನ, ಭೂತಾರಾಧನೆ ಹಾಗೂ ಇನ್ನಿತರ ಸಂಪ್ರದಾಯ ಆಚಾರ ವಿಚಾರಗಳು ಸಾಹಿತ್ಯ ಸಂಪತ್ತನ್ನು‌ ಹೆಚ್ಚಿಸಿವೆ‌ ಎಂದರು.

ಶ್ರಮ, ತಾಳ್ಮೆ, ಮಾತೃಹೃದಯ, ವಿನಯವಂತಿಕೆ, ಪರಿಸರದ ತಿಳುವಳಿಕೆ ಇದ್ದರೆ ಮಾತ್ರ ಸಾಹಿತಿಯಾಗಬಲ್ಲ. ಪ್ರಚಾರಕ್ಕೋಸ್ಕರ ಸಾಹಿತಿಯಾಗುವುದು ಬೇಡ ಎಂದ ಅವರು ನಮ್ಮತನವನ್ನು‌ ಕಾಪಾಡಿಕೊಂಡು ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಹೊಣೆ ನಮ್ಮೆಲ್ಲರಲ್ಲಿರಲಿ ಎಂದು ಆಶಿಸಿದರು.

ಯಕ್ಷಗಾನ ಕವಿ, ಅರ್ಥಧಾರಿ ದಿವಾಕರ ಹೆಗಡೆ, ಕೆರೆಹೊಂಡ ಅವರು “ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ,ಯಕ್ಷಗಾನವೆಂಬುದು  ಮುಕ್ತ ವಿಶ್ವವಿದ್ಯಾಲಯವಿದ್ದ ಹಾಗೆ . ಯಕ್ಷಗಾನ ಸಾಹಿತ್ಯ ಕನ್ನಡದ  ಇಡೀ  ರಂಗ ಭೂಮಿಯನ್ನು ಆಳಿತ್ತು. ಯಕ್ಷಗಾನದವರ ಭಾಷೆ ಶುದ್ಧವಾಗಿರುತ್ತದೆ ಎಂಬ ಮಾತು ಜನಜನಿತ. ಯಕ್ಷಗಾನವು ತರ್ಕಬದ್ಧವಾಗಿ, ವಿಮರ್ಶಾತ್ಮಕವಾಗಿ ಆಲೋಚನೆ ಮಾಡುವುದಕ್ಕೆ ಪ್ರೇರೇಪಿಸಿದೆ. ಭಾವಗೀತೆಗಳ ಬಂಧಕ್ಕೂ ಯಕ್ಷಗಾನ ಸಾಹಿತ್ಯವೇ  ಪ್ರೇರಣೆಯಾಗಿದೆ. ಯಕ್ಷಗಾನದಲ್ಲಿ 6೦೦೦ಕ್ಕೂ ಅಧಿಕ  ಪ್ರಸಂಗಳು ,5೦೦ ಕವಿಗಳಿಂದ  1೦ ಲಕ್ಷಕ್ಕೂ ಹೆಚ್ಚು ಪದ್ಯಗಳು ಬಂದಿವೆ. ಯಕ್ಷಗಾನ ಸಾಹಿತ್ಯವನ್ನು ಸಾಹಿತ್ಯ ಅಕಾಡೆಮಿ  ಗಂಭೀರವಾಗಿ ಪರಿಗಣಿಸಿಲ್ಲ.ಯಕ್ಷಗಾನದಲ್ಲಿ   ಭಾಷಾ ಪರಿಣತಿ,ತರ್ಕಬದ್ಧ  ವ್ಯಾಕರಣ,ಸಂಶೋಧನೆ,ವಿಮರ್ಶೆ,ಪ್ರಸಂಗ ಸಾಹಿತ್ಯ ಹಾಗು ಪಠ್ಯಗಳು ಬರಬೇಕಾಗಿದೆ  ಎಂದು ಅಭಿಪ್ರಾಯಪಟ್ಟರು. 


 ಕವಿಸಮ್ಮಿಲನ    : ಕವಿಸಮ್ಮಿಲನದ ಅವಲೋಕನ ಮಾಡಿದ ಕವಯತ್ರಿ, ತುಳು ಲಿಪಿ ಶಿಕ್ಷಕಿ, ತುಳುವೆರೆ ಕಲ ಇದರ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅವರು  ಮಕ್ಕಳು ಲಲಿತಕಲೆಗಳಲ್ಲಿ ತೊಡಗಿಸಿಕೊಂಡರೆ ದುಶ್ಚಟಗಳಿಗೆ ಬಲಿಯಾಗದೆ ಕ್ರಿಯಾಶೀಲರಾಗಿ ಬೆಳೆಯುತ್ತಾರೆ  . ಇದರಲ್ಲಿ ತಾಯಂದಿರ ಪಾತ್ರ ಮುಖ್ಯವಾಗುತ್ತದೆ.  ತಾಯಿಯವರು ಕಂಡ ಕನಸು ಬೇಗ ನನಸಾಗುತ್ತದೆ.  ಏಕತೆ, ಜಾತ್ಯತೀತಯ ಭಾರತದ ಕಲ್ಪನೆಯು ಸಾಂಘಿಕ ಭಾವವಾಗಬೇಕು ಎಂದು  ಅಭಿಪ್ರಾಯ ವ್ಯಕ್ತಪಡಿಸಿದರು. 
ಕವಿ ಸಮ್ಮಿಲನದಲ್ಲಿ ಅಶ್ವಿಜಾ ಶ್ರೀಧರ್, ಅರುಣಾ ಶ್ರೀನಿವಾಸ್, ಆಶಾ ಅಡೂರು, ನಿಶಾ ಸಂತೋಷ್, ನಯನಾ ಟಿ. , ವನಜಾ ಜೋಶಿ, ಸಮ್ಯಕ್ ಜೈನ್, ವಿದ್ಯಾಶ್ರೀ ಅಡೂರು, ನಾಗಶ್ರೀ ದಾತೆ, ಸೋನಾಕ್ಷಿ, ವೃಂದಾ ತಾಮ್ಹಣ್ ಕರ್-11ಮಂದಿ ಕವಿಗಳು  “ನನ್ನ ಕನಸಿನ ಭಾರತ” ಎಂಬ  ವಿಷಯದಲ್ಲಿ ಸ್ವರಚಿತ ಕವನಗಳನ್ನು ವಾಚಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಸಿದ  ತಾಲೂಕು ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳವರ್ಮ ಅವರು, ನಾವು ವಿದ್ಯಾರ್ಥಿಗಳಾಗಿದ್ದಾಗ ಯಾರ್ಯಾರದೋ ಇತಿಹಾಸವನ್ನು ಓದಿದ್ದೇವೆಯೇ ಹೊರತು ನಮ್ಮವರ, ನಮ್ಮ ನೆಲದ ಇತಿಹಾಸದ ಅರಿವನ್ನು ಅರ್ಥವಾಗುವಂತೆ ವಿವರಿಸಿಲ್ಲ. ಹೀಗಾಗಿ ಅ ಭಾ ಸಾ  ಪ ರಾಷ್ಟ್ರೀಯತೆಯ ಮನೋಭಾವ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.


 ಪುಸ್ತಕಗಳ ಅನಾವರಣ: ಇದೆ ಸಂದರ್ಭದಲ್ಲಿ  ಶಾಂತಾ ಜೆ. ಅಳದಂಗಡಿ ಅವರ ‘ಕಾವ್ಯಯಾನ’, ಕವನ ಸಂಕಲನ  ,ವಿನುತಾ ರಜತ್ ಗೌಡ ಅವರ ‘ಪ್ರತಿಬಿಂಬ’,  ಲೇಖನ ಸಂಕಲನ  ಹಾಗೂ ಅ.ಭಾ.ಸಾ.ಪ. ಬೆಳ್ತಂಗಡಿ ತಾ. ಸಮಿತಿಯ  ಉದಯೋನ್ಮುಖ ಕವಿಗಳ ಕವನ ಸಂಕಲನ   ‘ಮೊದಲ ಹೆಜ್ಜೆ’  ಕೃತಿಗಳನ್ನು  ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಅನಾವರಣಗೊಳಿಸಿ  ಮಕ್ಕಳು ಪುಸ್ತಕಕ್ಕೆ ಒಗ್ಗಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.   ಸಮಾಜದ ಅಂಕು ಡೊಂಕು,ಜೀವನ ಮೌಲ್ಯಗಳನ್ನು   ಅಳವಡಿಸಿ ಮನಸ್ಸನ್ನು ನಿಗ್ರಹಮಾಡುವ ವಿಚಾರಧಾರೆಗಳು ಕೃತಿಗಳಲ್ಲಿ ಬರಬೇಕು ಎಂದು ನುಡಿದರು. 

ಪರಿಷದ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್, ಕಾರ್ಯದರ್ಶಿ ಶೈಲೇಶ್, ಸಂಚಾಲಕ ಸುಂದರ ಶೆಟ್ಟಿ, ತಾಲೂಕು ಕಾರ್ಯದರ್ಶಿ ಸುಭಾಷಿಣಿ, ಕೋಶಾಧಿಕಾರಿ ಕೇಶವ ಭಟ್ ಅತ್ತಾಜೆ, ರಾಮಕೃಷ್ಣ ಭಟ್ ಬೆಳಾಲು, ಕಸಾಪ ತಾಲೂಕು ಅಧ್ಯಕ್ಷ ಯದುಪತಿ ಗೌಡ, ರೆಸಾರ್ಟ್ ಮಾಲಕ,ವಕೀಲ ಮುರಲೀ ಬಲಿಪ, ಉಪನ್ಯಾಸಕ ರವಿ ಮಂಡ್ಯ,ಪ್ರಕಾಶ್ ನಾರಾಯಣ,  ಮೀನಾಕ್ಷಿ,ಮಹಾಬಲ ಗೌಡ, ಗುರುನಾಥ ಪ್ರಭು, ನಿತ್ಯಾನಂದ ನಾವರ , ರಾಜು ಶೆಟ್ಟಿ , ರಘುರಾಮ ಶೆಟ್ಟಿ, ಜಯಂತ ಶೆಟ್ಟಿ ಕುಂಟಿನಿ ಮೊದಲಾದವರು   ಉಪಸ್ಥಿತರಿದ್ದರು.


 ಆರಂಭದಲ್ಲಿ ಭಾರತ ಮಾತೆ ಹಾಗೂ ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಶಿಕ್ಷಕಿ ಮೇಧಾ ಅಶೋಕ್  ಆಶಯ ಗೀತೆ ಹಾಡಿದರು.  ಪರಿಷದ್‌ನ ಮಕ್ಕಳ ಪ್ರಕಾರ ಮತ್ತು ವಿದ್ಯಾರ್ಥಿ ಪ್ರಕಾರದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆದವು.  


“ವಿದ್ಯಾರ್ಥಿಗಳಲ್ಲಿ ಸಾಹಿತ್ಯದೊಲವು “ಎಂಬ ಕುರಿತು ಉಪನ್ಯಾಸ ನೀಡಿದ ಆಳ್ವಾಸ್ ಕಾಲೇಜು  ಪ್ರಾಧ್ಯಾಪಕ ಡಾ!ಯೋಗೀಶ್ ಕೈರೋಡಿ ಆಧುನಿಕ ಬದುಕಿನ ತಲ್ಲಣ,ಸಮಸ್ಯೆಗಳಿಗೆ ಪುಸ್ತಕಗಳ ಓದು ಪರಿಹಾರವಾಗಬಲ್ಲುದು.  ಮಕ್ಕಳಲ್ಲಿ ಓದಿನ ಬಗ್ಗೆ ಸಹಜವಾದ  ಆಸಕ್ತಿ   ,ಒತ್ತಾಯದ ವಾತಾವರಣ    ಮನೆ,ಶಾಲೆಗಳಲ್ಲಿ  ಮೂಡಿಸಲು ಮನಸ್ಸು ಅರಳುವ ಕೃತಿಗಳನ್ನು  ಕೊಡಬೇಕಾಗಿದೆ.  ಪುಸ್ತಕದ ಜತೆಗೆ ಅಂತರ್ಮುಖಿ ಹಾಗು ಬಹುರ್ಮುಖಿಗಳಾಗಿ  ಬೆಳೆಯಲು  ಸಾಹಿತ್ಯ ಸಮೃದ್ಧಿಗೊಳಿಸುವ ಪೂರಕ  ಅಂಶಗಳನ್ನು ಅಳವಡಿಸಬೇಕು ಎಂದರು.  ತಾಲೂಕು ಸಮಿತಿ ಅಧ್ಯಕ್ಷ ಪ್ರೊ.ಗಣಪತಿ ಭಟ್   ಕುಳಮರ್ವ ಸ್ವಾಗತಿಸಿದರು. ರಾಮಕೃಷ್ಣ ಭಟ್ ಉಜಿರೆ  ಕಾರ್ಯಕ್ರಮ ನಿರ್ವಹಿಸಿದರು.                                                         

ಸಮಾರೋಪ ಸಮಾರಂಭದಲ್ಲಿ  ರಘುನಂದನ್ ಭಟ್  ಮಾತನಾಡಿ ಅ ಭಾ ಸಾ ಪ  ಬಂಧುತ್ವ ಬೆಸೆಯುವ,ಕುಟುಂಬ ಭಾವದಲ್ಲಿ ಸಂಘಟನೆಯ ಮೂಲಕ ಭಾರತ ಮಾತೆಯನ್ನು ಸ್ಮರಿಸುವ ಕಾರ್ಯಕ್ರಮ ಪ್ರೇರಣೆ ನೀಡುವಂತಹುದು. ಉಜಿರೆಯ ಪ್ರಕೃತಿ,ಅ ಭಾ ಸಾ ಪ  ಮಹಿಳಾ ಹಾಗು ಮಕ್ಕಳ ವಿಭಾಗ  ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ  ಸದಾ  ನೆನಪಿನಲ್ಲಿರುತ್ತದೆ  ಎಂದು ಅಭಿನಂದಿಸಿದರು .  ಶಿವಪ್ರಸಾದ್ ಸುರ್ಯ ಅನಿಸಿಕೆ ವ್ಯಕ್ತಪಡಿಸಿ ” ತೆಂಕಣದಲ್ಲಿ ನುಡಿದಿಬ್ಬಣ” ದ ವೈವಿಧ್ಯತೆಯನ್ನು  ಅಭಿವ್ಯ ಕ್ತಗೊಳಿಸಿ ದರು. ತಾಲೂಕು ಅಧ್ಯಕ್ಷ ಪ್ರೊ.ಗಣಪತಿ ಭಟ್ ಕುಳಮರ್ವ   ಕಾರ್ಯಕ್ರಮದಲ್ಲಿ ಸಹಕರಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿ ಅಭಿನಂದಿಸಿದರು. ರಾಮಕೃಷ್ಣ ಭಟ್ ಬೆಳಾಲು  ಕಾರ್ಯಕ್ರಮ ನಿರೂಪಿಸಿದರು.

Related posts

ಕಳಿಯ ಗ್ರಾ.ಪಂ. ಅಧ್ಯಕ್ಷೆ ಸುಭಾಷಿಣಿ ಕೆ.ಗೌಡ ಹಾಗೂ ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಲಾಯಿಲ ಗುರಿಂಗಾನದಲ್ಲಿ ಗುಡ್ಡದಲ್ಲಿ ಭಾರಿ ಬೆಂಕಿ ಅನಾಹುತ:

Suddi Udaya

ಸುಲ್ಕೇರಿ ಗ್ರಾ.ಪಂ. ವತಿಯಿಂದ ಸ್ವಾಮಿ ವಿವೇಕಾನಂದರ ಪುತ್ಥಳಿ ಲೋಕಾರ್ಪಣೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷ ವಿನಯಚಂದ್ರ ಬೆಂಬಲ

Suddi Udaya

ಧರ್ಮಸ್ಥಳ: ಬೈಕ್ ಗೆ ಕಾರು ಡಿಕ್ಕಿ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!