ನಿಡ್ಲೆ: ಬರೆಂಗಾಯ ದ.ಕ.ಜಿ.ಪ.ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮವು ಡಿ.27 ಮತ್ತು 28ರಂದು ನಡೆಯಲಿದೆ.
ಡಿ.27ರಂದು ಬೆಳಿಗ್ಗೆ ಬರೆಂಗಾಯ ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ, ಮಂಗಳೂರು ಉದ್ಯಮಿಗಳಾದ ರಮೇಶ್ ರಾವ್ ಕೊಡಂಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ದಿ| ಅನಂತ ಪದ್ಮನಾಭಯ್ಯ ಪಾಂಡೀಲು ಇವರ ಕುಟುಂಬಸ್ಥರು ನೀಡಿದ ನೂತನ ಕೊಠಡಿಯ ಉದ್ಘಾಟನಾ ಸಮಾರಂಭದ ಉದ್ಘಾಟನೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ.
ನಂತರ ಸಭಾ ಕಾರ್ಯಕ್ರಮ ಜರುಗಲಿದ್ದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವಾರ್ಪಣೆ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರವದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರುಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಹಾಗೂ ಸುದರ್ಶನ ವಿಜಯ ಮತ್ತು ನರಕಾಸುರ ಮೋಕ್ಷ ಯಕ್ಷಗಾನ ಬಯಲಾಟ ನಡೆಯಲಿದೆ.
ಡಿ.28ರಂದು ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಲಾ ಮಕ್ಕಳಿಗೆ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ನಂತರ ಶಾಲಾ ಮಕ್ಕಳಿಗೆ ಹಾಗೂ ಊರವರಿಗೆ ಛದ್ಮವೇಷ ಕಾರ್ಯಕ್ರಮ ನಡೆಯಲಿದೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾಲೆಯಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಎಸ್‌ಡಿಎಂ ಅಧ್ಯಕ್ಷರುಗಳಿಗೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಿಗೆ, ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಸರಕಾರಿ ಸೇವೆ ಪಡೆದುಕೊಂಡ ಹಿರಿಯ ವಿದ್ಯಾರ್ಥಿಗಳಿಗೆ, ಕ್ರೀಡೆ ಮತ್ತು ಶೈಕ್ಷಣಿಕವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಲಿದೆ. ರಾತ್ರಿ ಅಂಗನವಾಡಿ ಪುಟಾಣಿಗಳು ಶಾಲಾ ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ನೃತ್ಯಗಳು ಹಾಗೂ ಮಹಿಳಾ ಹಿರಿಯ ವಿದ್ಯಾರ್ಥಿಗಳಿಂದ “ಆರ್ ಬುಡಯೆರ್” ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಕಾರ್ಯಕ್ರಮದ ನೇರಪ್ರಸಾರವನ್ನು ಸುದ್ದಿ ಉದಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗುವುದು.