ಬೆಳ್ತಂಗಡಿ: ಕೋರ್ ಕಮಿಟಿ ಸಭೆ ವೇಳೆ ಹರೀಶ್ ಕುಮಾರ್ ರಾಜೀನಾಮೆ ನೀಡಿದ್ದಾಗಿ ಕೆಲವು ವೆಬ್‌ಸೈಟ್‌ಗಳಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನಲೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರು “ನಾನು ರಾಜಕೀಯ ನಿವೃತ್ತಿ ನೀಡಿಲ್ಲ, ಕಿಡಿಗೇಡಿಗಳು ಸುಳ್ಳು ಸುದ್ದಿ ಹಂಚಿದ್ದಾರೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಇದು ಸತ್ಯಕ್ಕೆ ದೂರವಾದ ಸುದ್ದಿ. ನಾನು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದ್ದೆ. ಹೊಸ ವರ್ಷ ಪ್ರಯುಕ್ತ ಸಿಹಿ ಹಂಚಿದ್ದು ಹೌದು, ಭಾಷಣ ಮಾಡಿದ್ದೂ ಹೌದು. ಆದರೆ ಎಲ್ಲೂ ಕೂಡಾ ರಾಜೀನಾಮೆ ನೀಡುವುದಾಗಿ ಹೇಳಿಲ್ಲ ಎಂದರು.ಈ ಕುರಿತು ಹರೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಎರಡು ಅವಧಿ ಪೂರ್ಣಗೊಳಿಸಿದ್ದೇನೆ. ಎರಡು ವರ್ಷ ಹಿಂದೆಯೇ ರಾಜಿನಾಮೆ ಕೊಟ್ಟಿದ್ದೆ. ಆದರೆ ಚುನಾವಣೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಮುಂದುವರಿಯಲು ಹೈಕಮಾಂಡ್ ಸೂಚನೆಯಿತ್ತು. ಏಳು ವರ್ಷ ಏಳು ತಿಂಗಳಿನಿಂದ ಅಧ್ಯಕ್ಷನಾಗಿದ್ದೇನೆ. ಯಾರ ಹೆಸರನ್ನು ಹೈಕಮಾಂಡ್ ಪ್ರಕಟಿಸುತ್ತದೋ ಆಗಲೇ ನಾನು ಅಧ್ಯಕ್ಷ ಹುದ್ದೆ ಹಸ್ತಾಂತರಿಸುತ್ತೇನೆ. ರಾಜಕೀಯ ನಿವೃತ್ತಿಯ ಮಾತೇ ಬರುವುದಿಲ್ಲ ಎಂದು ಹರೀಶ್ ಕುಮಾರ್ ಸ್ಪಷ್ಟನೆ ನೀಡಿದರು.