ಉಜಿರೆ: ರಾಷ್ಟ್ರೀಯ ಸೇವಾ ಯೋಜನೆಯು ವಿಪುಲವಾದ ಅವಕಾಶಗಳನ್ನು ಪಡೆಯಲು ಮಾತ್ರವಲ್ಲದೇ ಜೀವನಕ್ಕೆ ಬೇಕಾದ ಚಾರಿತ್ರ್ಯ , ಸಂವಹನ , ಸೃಜನಶೀಲತೆ , ಉನ್ನತ ಕಾರ್ಯಕ್ಕೆ ಇನ್ನೊಬ್ಬರ ಮನ ಒಲಿಸುವ ಚಾಕಚಕ್ಯತೆ ಹಾಗೂ ಬದ್ಧತೆ ಇವುಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ. ನಾವು ಪುರಸ್ಕರಿಸಲ್ಪಡಲು ಇರುವ ಮಾರ್ಗಗಳನ್ನು ಕೂಡ ಎನ್ನೆಸ್ಸೆಸ್ ಕಲ್ಪಿಸಿಕೊಡುತ್ತದೆ. ಹೀಗೆ ಜೀವನದ ಧನಾತ್ಮಕ ತಿರುವಿಗೆ ರಾಷ್ಟ್ರೀಯ ಸೇವಾ ಯೋಜನೆ ಪೂರಕ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು ಹಾಗೂ ರಾಜ್ಯಪ್ರಶಸ್ತಿ ವಿಜೇತ ಪ್ರಾಕ್ತನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಟಿ. ಕೃಷ್ಣಮೂರ್ತಿ ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಅವರು ಮಾತನಾಡಿ ಭಾವೀ ಜೀವನದಲ್ಲಿ ಸಾಧನೆ ಹಾಗೂ ಸ್ಥಾನಮಾನಕ್ಕಾಗಿ ರಾ.ಸೇ ಯೋಜನೆಯು ಸಹಾಯಕ ಎಂದು ತಿಳಿಸಿದರು.
ಸಹ ಪ್ರಾಚಾರ್ಯ ಡಾ. ರಾಜೇಶ್ ಬಿ ಅವರು ಶುಭಾಶಂಸನೆ ಮಾಡಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ಕಛೇರಿ ಸಿಬ್ಬಂದಿಗಳಾದ ರಂಜಿತಾ ಹಾಗೂ ಚಂದ್ರಹಾಸ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಸನ್ಮಾನಿತರ ವಿವರ ನೀಡಿದರು.
ಸಲಹಾ ಸಮಿತಿಯ ಸದಸ್ಯರಾದ ಧನುಷ್ , ನಾಯಕರಾದ ಆದಿತ್ಯ ವಿ ಶರ್ಮಾ ಹಾಗೂ ಪ್ರಾಪ್ತಿ ಗೌಡ ಅವರನ್ನು ಗೌರವಿಸಲಾಯಿತು.
ಎರಡು ವರ್ಷಗಳ ಕಾಲ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿ ಸ್ವಯಂ ಸೇವಕರಿಗೆ ಪ್ರಮಾಣ ಪತ್ರ ನೀಡಲಾಯಿತು.
ಅಭಿಜಿತ್ , ಶ್ರಾವ್ಯ , ಐಶ್ವರ್ಯ , ಶ್ರುತಾ , ಸೌಜನ್ಯ ಹಾಗೂ ಆದಿತ್ಯ ಜೈನ್ ಇವರಿಗೆ ಉತ್ತಮ ಸ್ವಯಂ ಸೇವಕ ಬಹುಮಾನ ನೀಡಿ ಗೌರವಿಸಲಾಯಿತು.
ಘಟಕದ ನಾಯಕಿ ಪ್ರಾಪ್ತಿ ಗೌಡ ವಾರ್ಷಿಕ ವರದಿ ವಾಚಿಸಿದರು. ಸಂಕೇತ್ ಸ್ವಾಗತಿಸಿ , ಘಟಕದ ನಾಯಕ ಆದಿತ್ಯ ವಿ ವಂದಿಸಿದರು. ಸಂತೋಷ್ ನಿರೂಪಿಸಿದರು.