ಬೆಳ್ತಂಗಡಿ: ಅಮೃತ ಸೋಮೇಶ್ವರ ಅವರು ಸದಾ ಮಾನವೀಯತೆಯ ಪರವಾಗಿದ್ದರು. ವಿಶ್ವ ಮಾನವ ಕಲ್ಪನೆ ಅವರ ಉಸಿರಾಗಿತ್ತು ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ತಿಳಿಸಿದರು.
ಬೆಳ್ತಂಗಡಿಯಲ್ಲಿ ಜರುಗಿದ ಅಮೃತ ಸೋಮೇಶ್ವರ ಅವರ ನೆನಪಿನ ಕಾರ್ಯಕ್ರಮ ‘ಅಮೃತ ಮಥನ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಬ್ಬರಿಗೂ ಗೌರವದ ಬದುಕು ಸಿಗಬೇಕು ಎನ್ನುವುದರ ಬಗ್ಗೆ ಅವರು ಖಚಿತ ನೋಟವನ್ನು ಹೊಂದಿದ್ದರು. ಅವರ ಸಾಹಿತ್ಯ ಇದನ್ನೇ ಪ್ರತಿಪಾದಿಸುತ್ತದೆ. ತುಳು ಸಾಹಿತ್ಯ ಮತ್ತು ಯಕ್ಷಗಾನ ರಂಗಕ್ಕೆ ಅವರು ನೀಡಿದ ತಿರುವು ಅಸಾಧಾರಣವಾದದ್ದು ಎಂದರು.
ತಂದೆಯ ವ್ಯಕ್ತಿತ್ವ ಹಾಗೂ ಸಾಹಿತ್ಯದ ಅವಲೋಕನ ನಡೆಸಿದ ಡಾ. ಚೇತನ ಸೋಮೇಶ್ವರ ಅವರು ತಂದೆ ಮೌನಿ ಆದರೆ ಸಮಾಜದ ಅನ್ಯಾಯದ ಬಗ್ಗೆ ಸದಾ ದನಿ ಎತ್ತುತ್ತಿದ್ದರು. ಅವರ ಬರಹಗಳು ಒಂದು ರೀತಿಯಲ್ಲಿ ಸಾರ್ವಜನಿಕ ಆಸ್ತಿಯಾಗಿತ್ತು. ಜನಸಾಮಾನ್ಯರು ಇವರ ಗೀತೆಗಳನ್ನು ತಮ್ಮ ಬದುಕಿನ ಪ್ರತಿಬಿಂಬ ಎಂದು ಭಾವಿಸಿದ್ದರು ಎಂದರು.
ರಂಗ ನಿರ್ದೇಶಕ ವಿದ್ದು ಉಚ್ಚಿಲ್ ಅವರು ಅಮೃತ ಸೋಮೇಶ್ವರ ಅವರ ರಂಗ ನಾಟಕಗಳ ಬಗ್ಗೆ ಮಾತನಾಡಿ ತುಳು ರಂಗಭೂಮಿಗೆ ಹೊಸತನ ದೊರಕಿದ್ದು ಅಮೃತರ ರಚನೆಗಳಿಂದ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಚೇತನ್ ಅವರು ತಮ್ಮ ಮಾವನವರ ಮಾನವೀಯ ಗುಣವನ್ನು ಸ್ಮರಿಸಿದರು.
ಸಮಾಜ ವಿಜ್ಞಾನಿ ಪ್ರಕಾಶ ಭಟ್, ಚರಣ್ ಕುಮಾರ್, ನರೇಂದ್ರ ರೈ ದೇರ್ಲ, ಜಿತು ನಿಡ್ಲೆ, ಡಾ. ಉದಯಚಂದ್ರ, ಡಾ. ರವಿನಾರಾಯಣ ಚಕ್ರಕೋಡಿ ಮಾತನಾಡಿದರು
ಬೆಳ್ತಂಗಡಿಯಲ್ಲಿ ಜರುಗಿದ ‘ಅಮೃತ ಮಥನ’ ಕಾರ್ಯಕ್ರಮದಲ್ಲಿ ಅಮೃತ ಸೋಮೇಶ್ವರ ಅವರ ನುಡಿಗಳ ಫಲಕವನ್ನು ಅನಾವರಣ ಮಾಡಲಾಯಿತು. ರಾಜೇಶ್ವರಿ ಚೇತನ್, ಪ್ರಕಾಶ ಭಟ್, ಚೇತನ್ ಸೋಮೇಶ್ವರ, ವಿದ್ದು ಉಚ್ಚಿಲ್, ಜಿ ಎನ್ ಮೋಹನ್ ಹಾಜರಿದ್ದರು